ರಸಮಂಜರಿ ಕಲಾವಿದೆ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ; ಇಬ್ಬರ ಬಂಧನ
ರಾಂಚಿ: ಜಾರ್ಖಂಡ್ ನ ದುಮ್ಕಾದಲ್ಲಿ ಸ್ಪೇನ್ ಪ್ರವಾಸಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎನ್ನಲಾದ ಘಟನೆಯ 24 ಗಂಟೆಗಳ ಒಳಗಾಗಿ, ರಸಮಂಜರಿ ತಂಡದ ನರ್ತಕಿಯೊಬ್ಬರ ಮೇಲೆ ಶನಿವಾರ ರಾತ್ರಿ ಮೂವರಿಂದ ಸಾಮೂಹಿಕ ಅತ್ಯಾಚಾರ ನಡೆದ ಘಟನೆ ಪಲಮು ಜಿಲ್ಲೆಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಪಲಮು ಜಿಲ್ಲೆಯ ಬಿಶ್ರಾಂಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದ್ದು, ಈ ಕೃತ್ಯ ಎಸಗಿದವರು ಸಂತ್ರಸ್ತೆಯ ಪರಿಚಿತರೇ ಆಗಿದ್ದರು. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಮೂರನೇ ಆರೋಪಿಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ರಸಮಂಜರಿ ಪ್ರದರ್ಶನವೊಂದಕ್ಕೆ ಈ ನರ್ತಕಿಯನ್ನು ಆರೋಪಿಗಳ ಪೈಕಿ ಒಬ್ಬನಾದ ಗೋಲು ಕುಮಾರ್ ಎಂಬಾತ ಆಹ್ವಾನಿಸಿದ್ದ ಎನ್ನಲಾಗಿದೆ. ಆದರೆ ಈ ಪ್ರದರ್ಶನ ರದ್ದಾದ ಕಾರಣ ಗೋಲು ಕುಮಾರ್ ನ ಕೊಠಡಿಯಲ್ಲಿ ಸಂತ್ರಸ್ತೆ ತಂಗಿದ್ದರು ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ ರಾಕೇಶ್ ಸಿಂಗ್ ವಿವರ ನೀಡಿದ್ದಾರೆ.
"ನಾನು ಕೊಠಡಿಯಲ್ಲಿದ್ದಾಗ ಪಾನೀಯವನ್ನು ನೀಡಲಾಗಿದ್ದು, ಇದನ್ನು ಸೇವಿಸಿದ ಬಳಿಕ ಪ್ರಜ್ಞೆ ಕಳೆದುಕೊಂಡಿದ್ದೆ. ಆ ಬಳಿಕ ಮೂವರು ಅತ್ಯಾಚಾರ ಎಸಗಿದರು" ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಜಯ್ ಕುಮಾರ್ ಹಾಗೂ ದೀವಾನ್ ಕುಮಾರ್ ಎಂಬ ಇಬ್ಬರನ್ನು ಬಂಧಿಸಲಾಗಿದೆ. ಗೋಲು ಕುಮಾರ್ ತಲೆ ಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಮೂವರ ವಿರುದ್ಧವೂ ಭಾರತೀಯ ದಂಡಸಂಹಿತೆ ಸೆಕ್ಷನ್ 328 ಮತ್ತು 376(2) ಅನ್ವಯ ಪ್ರಕರಣ ದಾಖಲಿಸಲಾಗಿದೆ.