Fact Check | ಚೆಕ್ಗಳನ್ನು ಬರೆಯಲು ನಿರ್ದಿಷ್ಟ ಬಣ್ಣದ ಶಾಯಿ ಬಳಕೆಗೆ RBI ಮಾರ್ಗಸೂಚಿ ಹೊರಡಿಸಿದೆಯೇ?; ಇಲ್ಲಿದೆ ವಾಸ್ತವಾಂಶ...

PC : @PIBFactCheck
ಹೊಸದಿಲ್ಲಿ: ಚೆಕ್ಗಳನ್ನು ಬರೆಯಲು ಮಾರ್ಗಸೂಚಿಗಳನ್ನು ಆರ್ಬಿಐ ಬದಲಿಸಿದೆ ಎಂಬ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ‘ನೂತನ ಮಾರ್ಗಸೂಚಿಗಳ ಪ್ರಕಾರ 2025 ಜ.1ರಿಂದ ಕಪ್ಪು ಶಾಯಿಯಲ್ಲಿ ಬರೆದ ಚೆಕ್ಗಳನ್ನು ಸ್ವೀಕರಿಸಲಾಗುವುದಿಲ್ಲ, ಅವುಗಳನ್ನು ನೀಲಿ ಅಥವಾ ಹಸಿರು ಶಾಯಿಯಲ್ಲಿಯೇ ಬರೆಯಬೇಕು. ಚೆಕ್ಗಳ ತಿದ್ದುವಿಕೆ ಅಥವಾ ಬದಲಾವಣೆಗಳನ್ನು ತಡೆಯಲು ಆರ್ಬಿಐ ಈ ಕ್ರಮವನ್ನು ತೆಗೆದುಕೊಂಡಿದೆ’ ಎಂದು ಪೋಸ್ಟ್ ಹೇಳಿದೆ. 2025,ಜ.14ರ ʼದಿ ಟೈಮ್ಸ್ ಆಫ್ ಇಂಡಿಯಾʼದಲ್ಲಿ ಪ್ರಕಟಿತ ವರದಿಯಿಂದ ಈ ಮಾಹಿತಿಯನ್ನು ಪಡೆಯಲಾಗಿದೆ ಎಂದೂ ಪೋಸ್ಟ್ನಲ್ಲಿ ಹೇಳಲಾಗಿದೆ.
ಸತ್ಯಾಂಶವೇನು?
ಸತ್ಯವೇನೆಂದರೆ ವೈರಲ್ ಪೋಸ್ಟ್ ಸಂಪೂರ್ಣವಾಗಿ ಸುಳ್ಳು ಮಾಹಿತಿಯಿಂದ ಕೂಡಿದ್ದು, ಚೆಕ್ಗಳನ್ನು ಬರೆಯಲು ಕಪ್ಪು ಶಾಯಿ ಬಳಕೆಯನ್ನು ನಿಷೇಧಿಸಿ ಆರ್ಬಿಐ ಯಾವುದೇ ಮಾರ್ಗಸೂಚಿಗಳನ್ನು ಹೊರಡಿಸಿಲ್ಲ. ಆರ್ಬಿಐ ವೆಬ್ಸೈಟ್ನಲ್ಲಿ ಲಭ್ಯ ಮಾಹಿತಿಯಂತೆ ಅದು ಚೆಕ್ಗಳನ್ನು ಬರೆಯಲು ಯಾವುದೇ ನಿರ್ದಿಷ್ಟ ಶಾಯಿ ಬಣ್ಣಗಳನ್ನು ಸೂಚಿಸಿಲ್ಲ. ಭಾರತ ಸರಕಾರದ ಅಧಿಕೃತ ಸತ್ಯ ಪರಿಶೀಲನೆ ಘಟಕ ಪಿಐಬಿ ಫ್ಯಾಕ್ಟ್ಚೆಕ್ ಕೂಡ ವೈರಲ್ ಪೋಸ್ಟ್ ನಕಲಿಯಾಗಿದೆ ಮತ್ತು ಆರ್ಬಿಐ ಇಂತಹ ಯಾವುದೇ ಮಾರ್ಗಸೂಚಿಗಳನ್ನು ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ಆದ್ದರಿಂದ ವೈರಲ್ ಪೋಸ್ಟ್ನಲ್ಲಿಯ ಮಾಹಿತಿ ಸಂಪೂರ್ಣ ಸುಳ್ಳಾಗಿದೆ.
ಸುದ್ದಿಸಂಸ್ಥೆಯು ವೈರಲ್ ಪೋಸ್ಟ್ನ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು ಸಂಬಂಧಿತ ಕೀವರ್ಡ್ ಸರ್ಚ್ ನಡೆಸಿದ್ದು, ಚೆಕ್ಗಳನ್ನು ಬರೆಯಲು ಕಪ್ಪು ಶಾಯಿಯ ಬಳಕೆಯನ್ನು ಆರ್ಬಿಐ ನಿಷೇಧಿಸಿದೆ ಎನ್ನುವುದನ್ನು ಸೂಚಿಸುವ ಯಾವುದೇ ವಿಸ್ವಾಸಾರ್ಹ ವರದಿಯು ಕಂಡು ಬಂದಿಲ್ಲ. ಆರ್ಬಿಐ ನಿಜಕ್ಕೂ ಇಂತಹ ಮಾರ್ಗಸೂಚಿಗಳನ್ನು ಹೊರಡಿಸಿದ್ದರೆ ಅದು ಮಾಧ್ಯಮಗಳ ಗಮನ ಸೆಳೆಯುತ್ತಿತ್ತು ಮತ್ತು ಹಲವಾರು ಸುದ್ದಿಸಂಸ್ಥೆಗಳು ಅದನ್ನು ವ್ಯಾಪಕವಾಗಿ ವರದಿ ಮಾಡುತ್ತಿದ್ದವು.
ವೈರಲ್ ಪೋಸ್ಟ್ ಜ.14ರ ʼದಿ ಟೈಮ್ಸ್ ಆಫ್ ಇಂಡಿಯಾʼದ ವರದಿಯು ಈ ಮಾಹಿತಿಯ ಮೂಲವಾಗಿದೆ ಎಂದು ಹೇಳಿಕೊಂಡಿದೆ. ಆದರೆ ʼಟೈಮ್ಸ್ ಆಫ್ ಇಂಡಿಯಾʼದ ವೆಬ್ಸೈಟ್ನಲ್ಲಿ ಜ.14ರ ಸಂಚಿಕೆಯನ್ನು ಜಾಲಾಡಿದಾಗ ಇಂತಹ ಯಾವುದೇ ವರದಿಯು ಅದರಲ್ಲಿ ಪ್ರಕಟವಾಗಿಲ್ಲ. (link)
ಆರ್ಬಿಐ ವೆಬ್ಸೈಟ್ನಲ್ಲಿಯೂ ಇಂತಹ ಯಾವುದೇ ಮಾರ್ಗಸೂಚಿಗಳ ಉಲ್ಲೇಖವಿಲ್ಲ. (link)
ಆರ್ಬಿಐ ತನ್ನ ವೆಬ್ಸೈಟ್ನಲ್ಲಿ ಅ.31,2022ರಂದು ಪ್ರಕಟಿಸಿರುವ ‘ಫ್ರೀಕ್ವೆಂಟ್ಲಿ ಆಸ್ಕಡ್ ಕ್ವೆಶ್ಚನ್ಸ್’ನಲ್ಲಿ, ‘ಚೆಕ್ಗಳನ್ನು ಬರೆಯಲು ಯಾವುದೇ ನಿರ್ದಿಷ್ಟ ಬಣ್ಣಗಳ ಶಾಯಿಯನ್ನು ಆರ್ಬಿಐ ಸೂಚಿಸಿಲ್ಲ, ಅದರೆ ಚೆಕ್ ಬರೆಯಲು ಬೇರೆ ಬೇರೆ ಬಣ್ಣಗಳ ಶಾಯಿಯನ್ನು ಬಳಸಿದರೆ ಅದು ಅಮಾನ್ಯಗೊಳ್ಳಬಹುದು’ ಎಂದು ತಿಳಿಸಲಾಗಿದೆ.
ಈ ಲೇಖನವನ್ನು ಮೊದಲು factly.in ಪ್ರಕಟಿಸಿದೆ. ʼಶಕ್ತಿ ಕಲೆಕ್ಟಿವ್ʼನ ಭಾಗವಾಗಿ ವಾರ್ತಾ ಭಾರತಿ ಅನುವಾದಿಸಿದೆ.