ಬ್ಯಾಂಕ್ ಗಳು, ಹಣಕಾಸು ಸಂಸ್ಥೆಗಳಿಗೆ ಪ್ರತ್ಯೇಕ ಇಂಟರ್ನೆಟ್ ಡೊಮೇನ್ ; ಆರ್ಥಿಕ ವಂಚನೆ ಹತ್ತಿಕ್ಕಲು ಪ್ರಯತ್ನ: ಆರ್ಬಿಐ ಘೋಷಣೆ

ಸಂಜಯ್ ಮಲ್ಹೋತ್ರಾ | PC : NDTV
ಮುಂಬೈ: ಭಾರತೀಯ ಬ್ಯಾಂಕ್ ಗಳಿಗೆ ಶೀಘ್ರದಲ್ಲೇ ‘bank.in’ ಎಂಬ ಪ್ರತ್ಯೇಕ ಇಂಟರ್ನೆಟ್ ಡೊಮೇನನ್ನು ಸೃಷ್ಟಿಸಲಾಗುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ಪ್ರಕಟಿಸಿದೆ. ಅದೇ ವೇಳೆ, ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗಾಗಿ ‘fin.in’ ಎಂಬ ಹೆಸರಿನಲ್ಲಿ ಇಂಟರ್ನೆಟ್ ಡೊಮೇನ್ ಸೃಷ್ಟಿಸಲಾಗುವುದು ಎಂದು ಅದು ಹೇಳಿದೆ. ಹಣಕಾಸು ವಂಚನೆಯನ್ನು ಹತ್ತಿಕ್ಕಲು ಮತ್ತು ಆನ್ಲೈನ್ ಹಣಕಾಸು ಸುರಕ್ಷತೆಯನ್ನು ಹೆಚ್ಚು ಸದೃಢಗೊಳಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಹಾಲಿ ಹಣಕಾಸು ವರ್ಷದ ಕೊನೆಯ ದ್ವೈಮಾಸಿಕ ಆರ್ಥಿಕ ನೀತಿಯನ್ನು ಅನಾವರಣಗೊಳಿಸಿ ಮಾತನಾಡಿದ ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ, ‘bank.in’ ಇಂಟರ್ನೆಟ್ ಡೊಮೇನ್ ಹೆಸರಿನ ನೋಂದಣಿಗಳು ಈ ವರ್ಷದ ಎಪ್ರಿಲ್ ನಿಂದ ಆರಂಭಗೊಳ್ಳುತ್ತವೆ ಹಾಗೂ ಮುಂದೆ 'fin.in' ಡೊಮೇನ್ ಹೆಸರನ್ನು ತರಲಾಗುವುದು ಎಂದರು.
ಹಣಕಾಸು ಕ್ಷೇತ್ರದಲ್ಲಿ ನಂಬಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ನುಡಿದರು. ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ನಡೆಯುತ್ತಿರುವ ವಂಚನೆಗಳ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು.
ಇದರ ವಿರುದ್ಧ ಹೋರಾಡುವುದಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಭಾರತೀಯ ಬ್ಯಾಂಕ್ ಗಳಿಗಾಗಿ 'bank.in' ಎಂಬ ಪತ್ಯೇಕ ಇಂಟರ್ನೆಟ್ ಡೊಮೇನನ್ನು ಜಾರಿಗೆ ತರಲಿದೆ ಎಂದು ಆರ್ಬಿಐ ಗವರ್ನರ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ಈ ಕ್ರಮವು ಸೈಬರ್ ಭದ್ರತಾ ಬೆದರಿಕೆಗಳು ಮತ್ತು ಫಿಶಿಂಗ್ ಮುಂತಾದ ಹಾನಿಕಾರಕ ಚಟುವಟಿಕೆಗಳನ್ನು ಕಡಿಮೆಗೊಳಿಸಬಹುದಾಗಿದೆ ಹಾಗೂ ಹಣಕಾಸು ಸೇವೆಗಳನ್ನು ಸುಭದ್ರಗೊಳಿಸಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಅದೂ ಅಲ್ಲದೆ, ವಿದೇಶಿ ‘ಕಾರ್ಡ್ ನಾಟ್ ಪ್ರೆಸೆಂಟ್’ ವ್ಯವಹಾರಗಳಲ್ಲಿ ‘ಅಡಿಶನಲ್ ಫ್ಯಾಕ್ಟರ್ ಆಪ್ ಅತೆಂಟಿಕೇಶನ್ (ಎಎಫ್ಎ)ಗೆ ಚಾಲನೆ ನೀಡುವ ಮೂಲಕ ಹೆಚ್ಚುವರಿ ಭದ್ರತಾ ಪದರವೊಂದನ್ನು ಸೇರಿಸಲೂ ಆರ್ಬಿಐ ನಿರ್ಧರಿಸಿದೆ.