ಹಣದುಬ್ಬರ ಕುರಿತು ಆರ್ಬಿಐ ಹೇಳಿಕೆ: ಕೇಂದ್ರದ ವಿರುದ್ಧ ಖರ್ಗೆ ತೀವ್ರ ವಾಗ್ದಾಳಿ
ಮಲ್ಲಿಕಾರ್ಜುನ ಖರ್ಗೆ | Photo: PTI
ಹೊಸದಿಲ್ಲಿ: ಹಣದುಬ್ಬರದಿಂದಾಗಿ ಸಾರ್ವಜನಿಕರು ಈಗ ಕಡಿಮೆ ಹಣ ಖರ್ಚು ಮಾಡುತ್ತಿದ್ದು, ಪರಿಣಾಮವಾಗಿ ಮಾರಾಟಗಳಲ್ಲಿ ಇಳಿಕೆಯಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನ ಹೇಳಿಕೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಶನಿವಾರ ಹಣದುಬ್ಬರ ಕುರಿತು ಕೇಂದ್ರವನ್ನು ತರಾಟೆಗೆತ್ತಿಕೊಂಡಿದ್ದಾರೆ.
‘ಹಣದುಬ್ಬರವಿದೆ ಎಂದು ಕಾಂಗ್ರೆಸ್ ಹೇಳಿದಾಗಿ ಮೋದಿಯವರ ಸಚಿವರು ಹಣದುಬ್ಬರವು ಗೋಚರಿಸುತ್ತಲೇ ಇಲ್ಲ ಎಂದು ಹೇಳುತ್ತಾರೆ. ಹಣದುಬ್ಬರವಿದೆ ಎಂದು ಸಾರ್ವಜನಿಕರು ಹೇಳಿದಾಗ ಮೋದಿ ಸರಕಾರವು ಪೂರೈಕೆಯಲ್ಲಿ ಅಡ್ಡಿ, ಹವಾಮಾನ, ಯುದ್ಧ ಇತ್ಯಾದಿ ನೆಪಗಳನ್ನು ಹೇಳುತ್ತದೆ ’ಎಂದು ಖರ್ಗೆ ಟ್ವೀಟಿಸಿದ್ದಾರೆ.
ಹಣದುಬ್ಬರದಿಂದಾಗಿ ಸಾರ್ವಜನಿಕರು ಕಡಿಮೆ ಖರ್ಚು ಮಾಡುತ್ತಿದ್ದಾರೆ,ಇದರಿಂದಾಗಿ ಮಾರಾಟಗಳು ಕಡಿಮೆಯಾಗಿವೆ ಮತ್ತು ಖಾಸಗಿ ಹೂಡಿಕೆಯ ಮೇಲೆ ಕೆಟ್ಟ ಪರಿಣಾಮವಾಗಿದೆ ಎಂದು ಸರಕಾರದ ಆರ್ಬಿಐ ಸ್ವತಃ ಹೇಳುತ್ತಿದೆ. ಈ ವಿಷ ಚಕ್ರವು ನಮ್ಮ ಆರ್ಥಿಕತೆಗೆ ಮಾರಕವಾಗಿದೆ. ನರೇಂದ್ರ ಮೋದಿಯವರೇ ನನಗೆ ಹೇಳಿ, ನೀವು ಈ ಆರ್ಬಿಐ ವರದಿಗೆ ಹೇಗೆ ಪ್ರತಿಕ್ರಿಯಿಸುತ್ತೀರಿ? ಒಳ್ಳೆಯ ದಿನಗಳು ಅಸಾಧ್ಯವಾಗುತ್ತಿವೆ ’ ಎಂದು ಖರ್ಗೆ ಹೇಳಿದ್ದಾರೆ.
ಹಣದುಬ್ಬರವು ವೈಯಕ್ತಿಕ ಬಳಕೆಯ ವೆಚ್ಚಗಳಿಗೆ ಕಡಿವಾಣ ಹಾಕುತ್ತಿದೆೆ, ಇದು ಕಾರ್ಪೊರೇಟ್ ಮಾರಾಟಗಳನ್ನು ಮಿತಗೊಳಿಸುತ್ತಿದೆ ಮತ್ತು ಸಾಮರ್ಥ್ಯ ಸೃಷ್ಟಿಯಲ್ಲಿ ಖಾಸಗಿ ಹೂಡಿಕೆಯನ್ನು ತಡೆಯುತ್ತಿದೆ ಎಂದು ಆರ್ಬಿಐ ಶುಕ್ರವಾರ ತನ್ನ ವರದಿಯಲ್ಲಿ ತಿಳಿಸಿತ್ತು. ಬಳಕೆದಾರ ವೆಚ್ಚವನ್ನು ಪುನಃಶ್ಚೇತನಗೊಳಿಸಲು ಹಾಗೂ ಕಾರ್ಪೊರೇಟ್ ಆದಾಯ ಮತ್ತು ಲಾಭದಾಯಕತೆಯನ್ನು ಹೆಚ್ಚಿಸಲು ಹಣದುಬ್ಬರವನ್ನು ತಗ್ಗಿಸುವ ಅಗತ್ಯವಿದೆ ಎಂದು ಅದು ಒತ್ತಿ ಹೇಳಿತ್ತು.