ರಾಜ್ಯ ಕಾಂಗ್ರೆಸ್ ಮುಖ್ಯಸ್ಥರು ಪತ್ರ ಬರೆದರೆ ಗೋಮಾಂಸ ನಿಷೇಧಿಸಲು ಸಿದ್ಧ : ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ ಸವಾಲು
ಹಿಮಂತ ಬಿಸ್ವ ಶರ್ಮ | PC : PTI
ಗುವಾಹಟಿ : ಅಸ್ಸಾಂನಲ್ಲಿ ಗೋಮಾಂಸ ನಿಷೇಧಿಸಬೇಕು ಎಂದು ಅಸ್ಸಾಂ ಕಾಂಗ್ರೆಸ್ ಮುಖ್ಯಸ್ಥ ಭೂಪೇನ್ ಕುಮಾರ್ ಬೋರಾ ಅವರು ನನಗೆ ಪತ್ರ ಬರೆದರೆ, ನಾನು ಅದನ್ನು ಮಾಡಲು ಸಿದ್ಧ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಸವಾಲು ಎಸೆದಿದ್ದಾರೆ.
ಸತತ ಐದು ಅವಧಿಗಳಿಂದ ಕಾಂಗ್ರೆಸ್ ನಿಯಂತ್ರಣದಲ್ಲಿದ್ದ ಮುಸ್ಲಿಂ ಪ್ರಾಬಲ್ಯದ ಸಮಗುರಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಬಿಜೆಪಿ ಗೋಮಾಂಸ ಹಂಚಿದೆ ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷಗಳು ಈ ವಿಷಯ ಪ್ರಸ್ತಾಪಿಸಿರುವುದರಿಂದ ನನಗೆ ಸಂತೋಷವಾಗಿದೆ ಎಂದು ಹೇಳಿದ್ದಾರೆ.
“ಸಮಗುರಿ ವಿಧಾನಸಭಾ ಕ್ಷೇತ್ರವು ಕಳೆದ 25 ವರ್ಷಗಳಿಂದ ಕಾಂಗ್ರೆಸ್ ಹಿಡಿತದಲ್ಲಿತ್ತು. ಸಮಗುರಿಯಂಥ ಕ್ಷೇತ್ರದಲ್ಲಿ ಕಾಂಗ್ರೆಸ್ 27,000 ಮತಗಳ ಅಂತರದಲ್ಲಿ ಪರಾಭವಗೊಂಡಿರುವುದು ಬಹುದೊಡ್ಡ ಐತಿಹಾಸಿಕ ಅವಮಾನ. ಇದು ಬಿಜೆಪಿಯ ಗೆಲುವಿಗಿಂತ, ಕಾಂಗ್ರೆಸ್ ನ ಸೋಲು” ಎಂದು ಹಿಮಂತ್ ಬಿಸ್ವ ಶರ್ಮ ವ್ಯಾಖ್ಯಾನಿಸಿದ್ದಾರೆ.
ಶನಿವಾರ ನಡೆದ ಪಕ್ಷದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ತೀರಾ ಬೇಸರದ ನಡುವೆಯೂ, ರಕೀಬುಲ್ ಹುಸೈನ್ ಗೋಮಾಂಸ ಸೇವನೆ ತಪ್ಪು ಎಂಬ ಒಂದು ಒಳ್ಳೆಯ ಸಂಗತಿ ಹೇಳಿದ್ದಾರೆ, ಹೌದಲ್ಲವೆ? ಚುನಾವಣೆಯಲ್ಲಿ ಗೆಲುವು ಸಾಧಿಸಲು ಮತದಾರರಿಗೆ ಗೋಮಾಂಸ ಹಂಚುವುದು ತಪ್ಪು ಎಂದು ಅವರು ಕಾಂಗ್ರೆಸ್-ಬಿಜೆಪಿಗೆ ಹೇಳಿದ್ದಾರೆ” ಎಂದು ಸಂಸದರಾಗಿ ಆಯ್ಕೆಯಾಗಿರುವ ರಕೀಬುಲ್ ಹುಸೈನ್ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಈ ವರ್ಷಾರಂಭದಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ 10.12 ಲಕ್ಷ ಮತಗಳ ದಾಖಲೆಯ ಅಂತರದಿಂದ ಗೆಲುವು ಸಾಧಿಸಿದ್ದ ರಕೀಬುಲ್ ಹುಸೈನ್, ಸಂಸದರಾಗಿ ಆಯ್ಕೆಯಾಗುವುದಕ್ಕೂ ಮುನ್ನ, ಸಮಗುರಿ ವಿಧಾನಸಭಾ ಕ್ಷೇತ್ರವನ್ನು ಸತತ ಐದು ಬಾರಿ ಪ್ರತಿನಿಧಿಸಿದ್ದರು.
“ಸ್ವತಃ ರಕೀಬುಲ್ ಹುಸೈನ್ ಅವರೇ ಗೋಮಾಂಸ ಸೇವನೆ ತಪ್ಪು ಎಂದು ಹೇಳಿರುವುದರಿಂದ, ಗೋಮಾಂಸವನ್ನು ನಿಷೇಧಿಸಬೇಕು ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ. ಬಿಜೆಪಿಯಾಗಲಿ, ಕಾಂಗ್ರೆಸ್ ಆಗಲಿ ಗೋಮಾಂಸದ ಕುರಿತು ಮಾತನಾಡಬಾರದು ಎಂದು ಅವರು ನನಗೆ ಲಿಖಿತ ಪತ್ರವನ್ನಷ್ಟೇ ಬರೆಯಬೇಕಿದೆ. ವಾಸ್ತವವಾಗಿ ಗೋಮಾಂಸವನ್ನು ಅಸ್ಸಾಂನಲ್ಲಿ ನಿಷೇಧಿಸಬೇಕಿದೆ. ನಾವು ಹಾಗೆ ಮಾಡಿದರೆ, ಎಲ್ಲ ಸಮಸ್ಯೆಗಳೂ ಬಗೆಹರಿಯಲಿವೆ” ಎಂದು ಅವರು ಕಾಂಗ್ರೆಸ್ ಪಕ್ಷವನ್ನು ಛೇಡಿಸಿದ್ದಾರೆ.
ರಕೀಬುಲ್ ಹುಸೈನ್ ಹೇಳಿಕೆಯ ಹಿನ್ನೆಲೆಯಲ್ಲಿ ಗೋಮಾಂಸದ ಬಗೆಗಿನ ನನ್ನ ನಿಲುವಿನ ಕುರಿತು ರಾಜ್ಯ ಕಾಂಗ್ರೆಸ್ ಅಧ್ಯಕ್ಷರಿಗೆ ಪತ್ರ ಬರೆಯಲಿದ್ದೇನೆ ಎಂದೂ ಅವರು ಹೇಳಿದ್ದಾರೆ.
“ಹೀಗಾಗಿ, ನಾನು ಭೂಪೇನ್ ಬೋರಾಗೆ ಪತ್ರ ಬರೆದು, ರಕೀಬುಲ್ ಹುಸೈನ್ ಅವರ ಹೇಳಿಕೆಯನ್ನು ನೀವೂ ಸಮರ್ಥಿಸುವುದಾದರೆ, ನನಗೆ ಕೇವಲ ಮಾಹಿತಿ ನೀಡಿ ಎಂದು ಕೇಳಲಿದ್ದೇನೆ. ಅದರ ಪ್ರಕಾರ, ನಾನು ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಗೋಮಾಂಸವನ್ನು ಸಂಪೂರ್ಣವಾಗಿ ನಿಷೇಧಿಸುತ್ತೇನೆ. ಆಗ ಬಿಜೆಪಿ, ಎಜಿಪಿ, ಸಿಪಿಎಂ ಹಾಗೂ ಇನ್ನಾರೂ ಗೋಮಾಂಸವನ್ನು ಹಂಚಲು ಸಾಧ್ಯವಾಗುವುದಿಲ್ಲ. ಹಿಂದೂಗಳು, ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರೆಲ್ಲ ಗೋಮಾಂಸ ಸೇವನೆಯನ್ನು ನಿಲ್ಲಿಸಬೇಕು. ಆಗ ಎಲ್ಲ ಸಮಸ್ಯೆಗಳೂ ಪರಿಹಾರವಾಗಲಿವೆ” ಎಂದು ಅವರು ಒತ್ತಿ ಹೇಳಿದ್ದಾರೆ.
“ಈ ಹೇಳಿಕೆ ಮೂಲಕ ರಕೀಬುಲ್ ಹುಸೈನ್ ಒಂದು ನಿಲುವು ತೆಗೆದುಕೊಂಡಿರುವುದರಿಂದ ನನಗೆ ಸಂತೋಷವಾಗಿದೆ. ಎರಡನೇ ನಿಲುವನ್ನು ಭೂಪೇನ್ ಬೋರಾ ತೆಗೆದುಕೊಳ್ಳಬೇಕಿದೆ” ಎಂದು ಅವರು ಸವಾಲು ಹಾಕಿದ್ದಾರೆ.
ಅಸ್ಸಾಂನಲ್ಲಿ ಗೋಮಾಂಸ ಸೇವನೆ ಕಾನೂನು ಬಾಹಿರವಲ್ಲ. ಆದರೆ, 2021ರ ಅಸ್ಸಾಂ ಜಾನುವಾರು ಸಂರಕ್ಷಣಾ ಕಾಯ್ದೆ ಪ್ರಕಾರ, ಹಿಂದೂಗಳು, ಜೈನರು ಹಾಗೂ ಸಿಖ್ಖರು ಬಹುಸಂಖ್ಯಾತರಾಗಿರುವ ಪ್ರದೇಶಗಳು ಹಾಗೂ ಯಾವುದೇ ದೇವಾಲಯ ಅಥವಾ ವೈಷ್ಣವ ಮಠಗಳ ಐದು ಕಿಮೀ ವ್ಯಾಪ್ತಿಯಲ್ಲಿ ಗೋಹತ್ಯೆ ಅಥವಾ ಗೋಮಾಂಸ ಮಾರಾಟ ನಿಷಿದ್ಧವಾಗಿದೆ.