ಪನ್ನುನ್ ಹತ್ಯೆ ಸಂಚಿನಲ್ಲಿ ಭಾರತೀಯ ಅಧಿಕಾರಿ, ನಾಗರಿಕನ ಶಾಮೀಲಾತಿ ಆರೋಪ ಪರಿಶೀಲಿಸಲು ಸಿದ್ಧ: ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ (PTI)
ಹೊಸದಿಲ್ಲಿ: ಭಾರತೀಯ ಅಧಿಕಾರಿಯೊಬ್ಬರು ಹಾಗೂ ಭಾರತೀಯ ನಾಗರಿಕರೊಬ್ಬರು ಅಮೆರಿಕಾದ ನಾಗರಿಕನಾಗಿರುವ ಖಾಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನುನ್ನನ್ನು ಹತ್ಯೆಗೈಯ್ಯಲು ಅಮೆರಿಕಾದಲ್ಲಿ ಸಂಚು ಹೂಡಿದ್ದಾರೆಂಬ ಆರೋಪದ ಕುರಿತಂತೆ ಮೊದಲ ಬಾರಿ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ನಾಗರಿಕರೊಬ್ಬರು ಏನಾದರೂ ಒಳ್ಳೆಯದು ಅಥವಾ ಕೆಟ್ಟದ್ದು ಮಾಡಿದ್ದಾರೆಂದರಾದರೆ ಸರ್ಕಾರ ಅದನ್ನು ಪರಿಶೀಲಿಸಲು ಸಿದ್ಧವಿದೆ ಎಂದಿದ್ದಾರೆ.
ಇಂಗ್ಲೆಂಡ್ನ ʼದಿ ಫೈನಾನ್ಶಿಯಲ್ ಟೈಮ್ಸ್ʼ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮೋದಿ ಮಾತನಾಡುತ್ತಿದ್ದರು. “ಯಾರಾದರೂ ನಮಗೆ ಏನಾದರೂ ಮಾಹಿತಿ ನೀಡಿದರೆ ನಾವು ಖಂಡಿತಾ ಪರಿಶೀಲಿಸುತ್ತೇವೆ. ನಮ್ಮ ನಾಗರಿಕರು ಏನಾದರೂ ಒಳ್ಳೆಯದು ಅಥವಾ ಕೆಟ್ಟದ್ದನ್ನು ಮಾಡಿದ್ದರೂ ನಾವು ಅದನ್ನು ಪರಿಶೀಲಿಸಲು ಸಿದ್ಧವಿದ್ದೇವೆ. ಕಾನೂನು ಪಾಲನೆಗೆ ನಮ್ಮ ಬದ್ಧತೆಯಿದೆ,” ಎಂದು ಮೋದಿ ಹೇಳಿದರು.
ಅದೇ ಸಮಯ ಈ ಬೆಳವಣಿಗೆಯು ಭಾರತ-ಅಮೆರಿಕಾ ಸಂಬಂಧಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರದು ಎಂದ ಪ್ರಧಾನಿ, ಕೆಲ ಘಟನೆಗಳನ್ನು ರಾಜತಾಂತ್ರಿಕ ಸಂಬಂಧಗಳ ಜೊತೆ ಥಳಕು ಹಾಕುವುದು ಸರಿಯಲ್ಲ ಎಂಬುದು ತಮ್ಮ ಭಾವನೆ ಎಂದು ಹೇಳಿದ್ದಾರೆ.
"ಆದರೆ ವಿದೇಶಗಳಲ್ಲಿರುವ ಕೆಲ ತೀವ್ರಗಾಮಿ ಗುಂಪುಗಳ ಚಟುವಟಿಕೆಗಳ ಬಗ್ಗೆ ಭಾರತ ತೀವ್ರ ಕಳವಳ ಹೊಂದಿದೆ, ಈ ಶಕ್ತಿಗಳು ವಾಕ್ ಸ್ವಾತಂತ್ರ್ಯದ ನೆಪದಲ್ಲಿ ಬೆದರಿಕೆ ಹಾಗೂ ಹಿಂಸೆಗೆ ಪ್ರಚೋದನೆ ನೀಡುತಿವೆ,” ಎಂದು ಪ್ರಧಾನಿ ಹೇಳಿದರು.