ಹಣ ವರ್ಗಾವಣೆ ತಡೆ ಕಾಯ್ದೆ, ಮರುಪರಿಶೀಲನೆಗೆ ಸುಪ್ರೀಂ ಕೋರ್ಟ್ ಸಮ್ಮತಿ
Photo : PTI
ಹೊಸದಿಲ್ಲಿ: ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಮ್ಎಲ್ಎ)ಗೆ ತರಲಾಗಿರುವ ತಿದ್ದುಪಡಿಗಳನ್ನು ಎತ್ತಿಹಿಡಿದಿರುವ ತನ್ನ 2022 ಜುಲೈ ತೀರ್ಪಿನ ಮರುಪರಿಶೀಲನೆ ನಡೆಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಬುಧವಾರ ಒಪ್ಪಿದೆ.
ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್, ಸಂಜೀವ್ ಖನ್ನಾ ಮತ್ತು ಬೇಲಾ ಎಮ್. ತ್ರಿವೇದಿ ಅವರನ್ನೊಳಗೊಂಡ ಮೂವರು ನ್ಯಾಯಾಧೀಶರ ನ್ಯಾಯಪೀಠವೊಂದು, ಈ ಅರ್ಜಿಗಳ ವಿಚಾರಣೆಯನ್ನು ನವೆಂಬರ್ 22ಕ್ಕೆ ನಿಗದಿಪಡಿಸಿದೆ.
2002ರ ಹಣ ವರ್ಗಾವಣೆ ತಡೆ ಕಾಯ್ದೆಯ ಕೆಲವು ಪರಿಚ್ಛೇದಗಳ ಸಂವಿಧಾನ ಬದ್ಧತೆ ಮತ್ತು ಈ ಕಾಯ್ದೆಯಡಿ ಬರುವ ಅಪರಾಧಗಳನ್ನು ತನಿಖೆ ಮಾಡಲು ಅನುಷ್ಠಾನ ನಿರ್ದೇಶನಾಲಯಕ್ಕಿರುವ ಅಧಿಕಾರಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ 200ಕ್ಕೂ ಅಧಿಕ ಅರ್ಜಿಗಳನ್ನು ಕಳೆದ ವರ್ಷದ ಜುಲೈ 27ರಂದು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.
ಹಣ ವರ್ಗಾವಣೆ ಪ್ರಕರಣಗಳ ಎನ್ಫೋರ್ಸ್ಮೆಂಟ್ ಕೇಸ್ ಇನ್ಫಾರ್ಮೆಶನ್ ರಿಪೋರ್ಟ್ (ಇಸಿಐಆರ್)ಗಳನ್ನು ಇತರ ಅಪರಾಧಗಳ ಮೊದಲ ಮಾಹಿತಿ ವರದಿ (ಎಫ್ಐಆರ್)ಗಳಿಗೆ ಹೋಲಿಸಬಹುದಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಅನುಷ್ಠಾನ ನಿರ್ದೇಶನಾಲಯವು ಇಸಿಐಆರ್ನ ಪ್ರತಿಗಳನ್ನು ಆರೋಪಿಗಳಿಗೆ ನೀಡುವುದು ಕಡ್ಡಾಯವಲ್ಲ, ಬಂಧನಕ್ಕೆ ಕಾರಣಗಳನ್ನು ತಿಳಿಸಿದರೆ ಸಾಕು ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದರು.
2022 ಜುಲೈ ತೀರ್ಪಿನ ವಿರುದ್ಧದ ಮರುಪರಿಶೀಲನಾ ಅರ್ಜಿ ಬಾಕಿಯಿರುವಾಗಲೇ, ಹೊಸ ಅರ್ಜಿಗಳ ವಿಚಾರಣೆ ನಡೆಸುವುದಕ್ಕೆ ಕೇಂದ್ರ ಸರಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಆಕ್ಷೇಪ ವ್ಯಕ್ತಪಡಿಸಿದರು.
ಜಾಗತಿಕ ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದನೆಗೆ ಹಣಕಾಸು ಪೂರೈಕೆ ಮೇಲೆ ನಿಗಾ ಇಡುವ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ನ ನಿಯೋಗವೊಂದು ಹಣ ವರ್ಗಾವಣೆ ತಡೆ ಕಾಯ್ದೆಯ ಅನುಷ್ಠಾನವನ್ನು ಪರಿಶೀಲಿಸಲು ನವೆಂಬರ್ನಲ್ಲಿ ಭಾರತಕ್ಕೆ ಭೇಟಿ ನೀಡಲಿದೆ ಎಂದು ಮೆಹ್ತಾ ಹೇಳಿದರು. ಹಾಗಾಗಿ, ಪ್ರಕರಣದ ವಿಚಾರಣೆಯನ್ನು ಒಂದು ಅಥವಾ ಎರಡು ತಿಂಗಳು ಮುಂದೂಡುವುದು ‘‘ರಾಷ್ಟ್ರೀಯ ಹಿತಾಸಕ್ತಿ’’ಗೆ ಪೂರಕವಾಗಿರುತ್ತದೆ ಎಂದು ಅವರು ವಾದಿಸಿದರು.
ತೀರ್ಪಿನ ಕೆಲವು ಅಂಶಗಳನ್ನು ಮರುಪರಿಶೀಲಿಸಬೇಕು ಎಂದಷ್ಟೇ ಅರ್ಜಿದಾರರು ಕೋರಿದ್ದಾರೆ ಎಂದು ನ್ಯಾಯಪೀಠ ಹೇಳಿತು. ಮುಂದಿನ ವಿಚಾರಣೆಯಲ್ಲಿ, ಕೇಂದ್ರ ಸರಕಾರದ ಮೂಲ ಆಕ್ಷೇಪಗಳನ್ನು ಆಲಿಸುವುದಾಗಿ ಅದು ಹೇಳಿತು.
7, 10 ವರ್ಷಗಳ ಶಿಕ್ಷೆ ನೀಡುತ್ತೀರಿ, ದಂಡನಾ ಕಾನೂನು ಅಲ್ಲ ಎಂದೂ ಹೇಳುತ್ತೀರಿ!
ಇದಕ್ಕೂ ಮೊದಲು, ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಹಣ ವರ್ಗಾವಣೆ ತಡೆ ಕಾಯ್ದೆ ದಂಡನಾ ಕಾನೂನು ಅಲ್ಲ ಅಥವಾ ಯಾವುದಾದರೂ ರೀತಿಯ ಶಿಕ್ಷೆಯನ್ನು ವಿಧಿಸುವ ಕಾನೂನು ಅಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ನ 2022 ಜುಲೈ ಆದೇಶವು ಹೇಳಿದೆ ಎಂದು ಹೇಳಿದರು.
‘‘ಮೊದಲ ಸಮಸ್ಯೆ ಇಲ್ಲೇ ಇದೆ. ಅಕ್ರಮ ಹಣ ವರ್ಗಾವಣೆಗಾಗಿ ನಾನು ದೋಷಿ ಎಂದು ತೀರ್ಮಾನಿಸಬಹುದಾಗಿದೆ ಮತ್ತು ಏಳು ವರ್ಷಗಳ ಮತ್ತು ಕೆಲವು ಪ್ರಕರಣಗಳಲ್ಲಿ 10 ವರ್ಷಗಳ ಜೈಲು ಶಿಕ್ಷೆಯನ್ನು ನನಗೆ ವಿಧಿಸಬಹುದಾಗಿದೆ. ಮತ್ತೆ ಹೇಳುತ್ತೀರಿ, ಅದು ದಂಡಿಸುವ ಕಾಯ್ದೆ ಅಲ್ಲವೆಂದು’’ ಎಂದರು.
ತಮ್ಮನ್ನು ಆರೋಪಿಗಳಾಗಿ ಕರೆಸಲಾಗುತ್ತಿದೆಯೇ ಅಥವಾ ಸಾಕ್ಷಿಗಳಾಗಿ ಕರೆಸಲಾಗುತ್ತಿದೆಯೇ ಎನ್ನುವುದು ಈ ಕಾಯ್ದೆಯಡಿ ಸಮನ್ಸ್ ಪಡೆದವರಿಗೆ ಗೊತ್ತಿರುವುದಿಲ್ಲ ಎಂಬುದಾಗಿಯೂ ಅವರು ಹೇಳಿದರು.
‘‘ಅದೂ ಅಲ್ಲದೆ, ಆರೋಪಿಗಳಿಗೆ ಇಸಿಐಆರ್ಗಳನ್ನು ಕೊಡಬೇಕಾದ ಅಗತ್ಯವಿಲ್ಲ ಎಂದು ನ್ಯಾಯಾಲಯ ಯಾಕೆ ಹೇಳಿತು? ನನ್ನ ವಿರುದ್ಧದ ಆರೋಪ ಏನು ಎನ್ನುವುದೇ ನನಗೆ ತಿಳಿಯದಿರುವಾಗ, ನಾನು ಜಾಮೀನು ಹೇಗೆ ಪಡೆಯಲಿ?’’ ಎಂದು ಅವರು ಪ್ರಶ್ನಿಸಿದರು