56 ವರ್ಷಗಳ ಬಳಿಕ ಪತ್ತೆಯಾದ ವಾಯುಪಡೆ ಯೋಧನ ಮೃತದೇಹದ ಅವಶೇಷ
ಪತಿಯ ಬರುವಿಕೆಯನ್ನೇ ಕಾಯುತ್ತಿದ್ದ ಪತ್ನಿ 25 ವರ್ಷಗಳ ಹಿಂದೆ ನಿಧನ
PC: screengrab/x.com/ANI
ಮೀರಠ್: 102 ಮಂದಿಯನ್ನು ಹೊತ್ತಿದ್ದ ಅಂಟೊನೋವ್-12 ವಿಮಾನ 1968ರ ಫೆಬ್ರವರಿ 7ರಂದು ನಾಪತ್ತೆಯಾದಾಗ ಭಾರತೀಯ ವಾಯಪಡೆಯ ಯೋಧ ಮಲ್ಖನ್ ಸಿಂಗ್ ಗೆ 23 ವರ್ಷ. ಬಳಿಕ ಅದು ಹಿಮಾಚಲದ ರೋಹ್ಟಂಗ್ ಪಾಸ್ ನಲ್ಲಿ ಅಪಘಾತಕ್ಕೀಡಾದ್ದು ತಿಳಿದುಬಂದಿತ್ತು.
ಉತ್ತರ ಪ್ರದೇಶದ ಸಹರಣಪುರ ಜಿಲ್ಲೆಯ ಫತೇಪುರದಲ್ಲಿರುವ ಮಲ್ಖನ್ ಅವರ ಹಳೆಯ ಮನೆಗೆ ಮಂಗಳವಾರ ಇಬ್ಬರು ಸೇನಾ ಅಧಿಕಾರಿಗಳು ಆಗಮಿಸಿ, ಮಲ್ಖನ್ ಅವರ ಮೃತದೇಹದ ಅವಶೇಷಗಳು ಪತ್ತೆಯಾಗಿವೆ ಎಂದು ಮಾಹಿತಿ ನೀಡಿದರು. ಆಗ ಮೊದಲು ಮೌನ, ಬಳಿಕ ಸಂತಸ, ಬಳಿಕ ಕಣ್ಣೀರು. ಪ್ರತಿಯೊಬ್ಬರ ಮನಸ್ಸು ತುಂಬಿಬಂದಿತ್ತು. ಮೃತ ಯೋಧನ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಿಕೊಳ್ಳಲು ಕುಟುಂಬಕ್ಕೆ ತಿಳಿಸಲಾಯಿತು. ಅವರಿಗಾಗಿಯೇ 32 ವರ್ಷ ಕಾದ ಪತ್ನಿ ಈ ಭಾವನಾತ್ಮಕ ಕ್ಷಣದಲ್ಲಿ ಜೀವಂತ ಇರಲಿಲ್ಲ.
ಆತ ಮೃತಪಟ್ಟಿದ್ದಾನೆ ಎಂದು ನಂಬಲು ಕೂಡಾ ಆಗುತ್ತಿರಲಿಲ್ಲ. ಕಾರಣ ಆತ ಚಿರ ಯುವಕನಾಗಿದ್ದ ಆತ ಎಲ್ಲಾದರೂ ಇರಬಹುದು. ಒಂದಲ್ಲ ಒಂದು ದಿನ ಬಂದೇ ಬರುತ್ತಾನೆ ಎಂಬ ನಿರೀಕ್ಷೆಯಲ್ಲಿ ಆತನ ಪತ್ನಿ ಇದ್ದಳು. ಆತ ನಾಪತ್ತೆಯಾದಾಗ ಆಕೆಗೆ ಆಗಷ್ಟೇ ಹುಟ್ಟಿದ ಪುಟ್ಟ ಮಗ ಇದ್ದ. ಜೀವನವಿಡೀ ಕಾದ ಆಕೆ 2000 ಸುಮಾರಿಗೆ ಕೊನೆಯುಸಿರೆಳೆದಳು" ಎಂದು ಮಲ್ಖನ್ ಸಹೋದರ ಇಶಾಮ್ ಪಾಲ್ (65) ವಿವರಿಸಿದರು.
"25 ವರ್ಷ ಮೊದಲು ದೇಹ ಸಿಕ್ಕಿದ್ದರೆ, ಅವರ ಪತ್ನಿಯ ಆತ್ಮಕ್ಕೆ ಶಾಂತಿ ಸಿಗುತ್ತಿತ್ತು" ಎಂದು ಸಹೋದರ ಸಂಬಂಧಿ ವಿಶ್ವಾಸ್ ಸಿಂಗ್ ಹೇಳಿದರು. ಮಲ್ಖನ್ ಸಿಂಗ್ ಕಣ್ಮರೆಯಾದ ಬಳಿಕ ಆತನ ಬಗ್ಗೆ ಇದುವರೆಗೆ ಯಾವ ಮಾಹಿತಿಯೂ ಇರಲಿಲ್ಲ ಎಂದು ಕುಟುಂಬದವರು ಹೇಳುತ್ತಾರೆ.
"ಆತನ ಹುಡುಕಾಟದಲ್ಲಿ ಸಾಕಷ್ಟು ಅಲೆದ ಬಳಿಕ ನಾವು ನಿರೀಕ್ಷೆ ಕೈಬಿಟ್ಟಿದ್ದೆವು. ಹಲವು ವರ್ಷ ಕಾಲ ಪತ್ತೆಯಾಗದೇ ಇದ್ದಾಗ ಕುಟುಂಬ ಹೊಂದಾಣಿಕೆ ಮಾಡಿಕೊಂಡಿತು. ಮಲ್ಖನ್ ಪತ್ನಿ ಆತನ ಸಹೋದರ ಚಂದ್ರಪಾಲ್ ಸಿಂಗ್ನನ್ನು ವಿವಾಹವಾದಳು. ಮಲ್ಖನ್ ಅವರ ಏಕೈಕ ಪುತ್ರ ರಾಮಪ್ರಸಾದ್ ಗೆ ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರು. ರಾಮಪ್ರಸಾದ್ 2010ರಲ್ಲಿ ಮೃತಪಟ್ಟರು. ಮಲ್ಖನ್ ಪೋಷಕರು, ಪತ್ನಿ ಹಾಗೂ ಪುತ್ರನ ಕಾಯುವಿಕೆಯಲ್ಲೇ ಜೀವನ ಅಂತ್ಯಗೊಳಿಸಿದರು" ವಿಶ್ವಾಸ್ ಭಾವುಕರಾದರು.