ಅದಾನಿ ಹಗರಣದಲ್ಲಿ ಕೇಂದ್ರ ಸರಕಾರದ ಪಾತ್ರ ಬಹಿರಂಗ ಪಡಿಸಿದ 'ರಿಪೋರ್ಟರ್ಸ್ ಕಲೆಕ್ಟಿವ್' ವರದಿ
ದಾನಿ ಸಂಸ್ಥೆಗಳ ಅಕ್ರಮಗಳಿಗೆ ಸಂಬಂಧಿಸಿ ಅಮೇರಿಕ ದಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿ ಅರೆಸ್ಟ್ ವಾರಂಟ್ ಜಾರಿಯಾಗಿದೆ. ಇದೇ ಸಂದರ್ಭದಲ್ಲಿ ಹಗರಣದಲ್ಲಿ ಮೋದಿ ಸರಕಾರ ಹೇಗೆ ದೊಡ್ಡ ಪಾತ್ರ ವಹಿಸಿದೆ ಎಂಬುದನ್ನು reporters-collective.inನ ನಿತಿನ್ ಸೇಥಿ ಹಾಗೂ ಶ್ರೀಗಿರೀಷ್ ಜಾಲೀಹಾಳ್ ಅವರು ಮಾಡಿರುವ ತನಿಖಾ ವರದಿ ಬಿಚ್ಚಿಟ್ಟಿದೆ.
ಗೌತಮ್ ಅದಾನಿ ವಿರುದ್ಧ ಅಮೆರಿಕದ ನ್ಯಾಯಾಲಯದಲ್ಲಿ ದಾಖಲಾಗಿರುವ 2,000 ಕೋಟಿ ರೂ.ಗೂ ಹೆಚ್ಚು ಲಂಚ ನೀಡಿಕೆ ಮೂಲಕ ಬಂಪರ್ ಲಾಭದಾಯಕ ಸೌರ ಒಪ್ಪಂದಗಳನ್ನು ಪಡೆದ ಆರೋಪದಲ್ಲಿ ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ (ಎಸ್‌ಇಸಿಐ) ಪ್ರಮುಖ ಪಾತ್ರ ವಹಿಸಿದೆ.ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ ಭಾರತ ಸರಕಾರದ ಕಂಪನಿ. ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯುತ್ತಿರುವ ಕಂಪೆನಿ.
ಅದಾನಿ ಲಂಚ ಹಗರಣ ಬೆಳಕಿಗೆ ಬಂದಾಗಿನಿಂದಲೂ ಅದಾನಿ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಆದರೆ ಭಾರತ ಸರಕಾರದ ಈ ಕಂಪೆನಿಯ ಬಗ್ಗೆ ಮಾತ್ರ ಚರ್ಚೆಯಿಲ್ಲ. ಅದಾನಿ ಲಂಚ ಹಗರಣದಲ್ಲಿ ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾದ ಶಂಕಾಸ್ಪದ ಪಾತ್ರವನ್ನು ರಿಪೋರ್ಟರ್ಸ್ ಕಲೆಕ್ಟಿವ್ ಬಹಿರಂಗಪಡಿಸಿದೆ.
ಅದಾನಿ ಗ್ರೂಪ್ ಮಾತ್ರ ಒಪ್ಪಂದವನ್ನು ಪಡೆಯುವ ಹಾಗೆ ನಿಯಮಗಳನ್ನು ಹೇಗೆಲ್ಲ ಬದಲಾಯಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಅದಾನಿ ಗ್ರೂಪ್ ತನ್ನ ಪ್ರತಿಸ್ಪರ್ಧಿ ನವಯುಗ್ ಇಂಜಿನಿಯರಿಂಗ್ ಲಿಮಿಟೆಡ್ ಅನ್ನು ಬದಿಗೆ ಸರಿಸಿ ಗುತ್ತಿಗೆಯನ್ನು ತನ್ನದಾಗಿಸಿಕೊಳ್ಳುವುದು ಹೇಗೆ ಸಾಧ್ಯವಾಗಿದೆ ಎಂಬುದನ್ನು ನಿತಿನ್ ಸೇಥಿ ಮತ್ತು ಶ್ರೀಗಿರೀಶ್ ಜಾಲಿಹಾಳ್ ಅವರ ವರದಿ ವಿವರಿಸಿದೆ. ಅ ವರದಿಯ ಶೀರ್ಷಿಕೆಯೇ ಸೂಚಿಸುವ ಹಾಗೆ ಈ ಅನುಮಾನಾಸ್ಪದ ಸೌರ ವಿದ್ಯುತ್ ಹರಾಜಿನ ಹಿಂದೆ ಪೂರ್ತಿ ಪಾತ್ರ ನಿರ್ವಹಿಸಿರುವುದು ಮೋದಿ ಸರಕಾರ ಎನ್ನುತ್ತಿದೆ ವರದಿ.
ಸೌರಶಕ್ತಿ ಹರಾಜು ಪ್ರಕ್ರಿಯೆಯಲ್ಲಿ ಅದಾನಿ ಕಂಪೆನಿಗೆ ಇನ್ನಿಲ್ಲದಂಥ ರಿಯಾಯಿತಿಗಳನ್ನು ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ (ಎಸ್‌ಇಸಿಐ) ಕೊಟ್ಟಿದೆ ಎಂಬ ವಿಚಾರ ಬರುತ್ತದೆ.2019ರಲ್ಲಿ ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ (ಎಸ್‌ಇಸಿಐ) ಒಂದು ಟೆಂಡರ್ ಕರೆಯುತ್ತದೆ. ಅದರಲ್ಲಿ ಅದಾನಿ ಪಾಲುದಾರಿಕೆಯ ಕಂಪೆನಿ ಅಝುರೆ ಪವರ್ ಇಂಡಿಯಾ ಲಿಮಿಟೆಡ್ ಗೆದ್ದಿತು.ಮಹಾರಾಷ್ಟ್ರದಲ್ಲಿನ 6,600 ಮೆಗಾವ್ಯಾಟ್ ಹೈಬ್ರಿಡ್ ಸೋಲಾರ್ ಮತ್ತು ಉಷ್ಣ ವಿದ್ಯುತ್ ಸ್ಥಾವರಕ್ಕೆ ವಿದ್ಯುತ್ ಪೂರೈಸುವ ಗುತ್ತಿಗೆಯನ್ನು ಅದಾನಿ ಕಂಪೆನಿ ಪಡೆದುಕೊಂಡಿತು. ಅದೇ ಅಝುರೆ ಪವರ್ ಈಗ ಸುದ್ದಿಯಲ್ಲಿರುವುದು ಅಧಿಕಾರಿಗಳಿಗೆ ಹಣನೀಡಿದ ಆರೋಪಕ್ಕಾಗಿ. ದುಬಾರಿ ಸೌರಶಕ್ತಿಯನ್ನು ಖರೀದಿಸಲು ರಾಜ್ಯ ಸರಕಾರಿ ಅಧಿಕಾರಿಗಳಿಗೆ 2,000 ಕೋಟಿ ರೂ.ಗಳಿಗಿಂತ ಹೆಚ್ಚು ಲಂಚ ನೀಡಲು ಅದಾನಿ ಗ್ರೂಪ್‌ನೊಂದಿಗೆ ಸಹಕರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಸಾಕಷ್ಟು ನಿಯಂತ್ರಕ ಮೇಲ್ವಿಚಾರಣೆಯಿಲ್ಲದೆ ಸೌರಶಕ್ತಿಯನ್ನು ಹರಾಜು ಮಾಡಲು ವಿದ್ಯುತ್ ಸಚಿವಾಲಯ, ನವೀಕರಿಸಬಹುದಾದ ಇಂಧನ ಸಚಿವಾಲಯ ಮತ್ತು ಎಸ್‌ಇಸಿಐಯಲ್ಲಿ ಲಭ್ಯವಿರುವ ವಿಶಾಲವಾದ ನೀತಿ ವಿವೇಚನೆಯನ್ನು ಬಳಸಿಕೊಂಡು ಇದನ್ನು ಮಾಡಲಾಗಿದೆ ಎಂದು ದಾಖಲೆಗಳು ತೋರಿಸುತ್ತವೆ.
ಅದಾನಿ ಗ್ರೂಪ್‌ಗೆ ಸರಿಹೊಂದುವಂತೆ ಸೌರ ವಿದ್ಯುತ್ ಟೆಂಡರ್‌ಗಳನ್ನು ಸಿದ್ಧಪಡಿಸಿರುವುದು ಇದೇ ಮೊದಲಲ್ಲ.ಎರಡು ಬಿಜೆಪಿ ಆಡಳಿತದ ರಾಜ್ಯ ಸರಕಾರಗಳಲ್ಲಿ ಅದಾನಿ ಗ್ರೂಪ್‌ನ ಯೋಜನೆಗಳು ಮತ್ತು ಕಾರ್ಯಾಚರಣೆಗಳಿಗೆ ಆಕರ್ಷಕವಾಗಿ ಹೊಂದಿಕೊಳ್ಳುವ ಟೆಂಡರ್‌ಗಳನ್ನು ಹೇಗೆ ಹಾಕಲಾಗಿತ್ತು ಎಂಬುದನ್ನು ರಿಪೋರ್ಟರ್ಸ್ ಕಲೆಕ್ಟಿವ್ ಈ ಹಿಂದೆ ಬಹಿರಂಗಪಡಿಸಿದೆ.
ವರದಿ ಮಾಡಿದ ಹೊತ್ತಲ್ಲಿ ಅದಾನಿ ಗ್ರೂಪ್ ಆಗಲೇ ಒಂದು ಟೆಂಡರ್ ಅನ್ನು ಪಡೆದುಕೊಂಡಿತ್ತು ಮತ್ತು ಇನ್ನೊಂದನ್ನು ಗೆಲ್ಲುವ ತಯಾರಿಯಲ್ಲಿತ್ತು. ಆದರೆ ರಿಪೋರ್ಟರ್ಸ್ ಕಲೆಕ್ಟಿವ್ ತನಿಖಾ ವರದಿ ಪ್ರಕಟಿಸಿದ ಒಂದು ತಿಂಗಳ ನಂತರ ಎರಡನೇ ಟೆಂಡರ್ ಅನ್ನು ಹಿಂದೆಗೆದುಕೊಳ್ಳಲಾಯಿತು.
2011ರಿಂದ ಎಸ್‌ಇಸಿಐ, ಹರಾಜಿನ ಮೂಲಕ ಉತ್ಪಾದಕರಿಂದ ವಿದ್ಯುತ್ ಖರೀದಿಸುವುದು ಮತ್ತು ಅದನ್ನು ಕಮಿಷನ್‌ಗಾಗಿ ರಾಜ್ಯಗಳಿಗೆ ಮಾರಾಟ ಮಾಡುವಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದೆ. ವಿದ್ಯುತ್ ಸಚಿವಾಲಯ ಹರಾಜು ಮಾರ್ಗಸೂಚಿಗಳನ್ನು ನಿರ್ಧರಿಸುತ್ತದೆ. ನವೀಕರಿಸಬಹುದಾದ ಇಂಧನ ಸಚಿವಾಲಯ ಮತ್ತು ಎಸ್‌ಇಸಿಐ ಹರಾಜು ವಿವರಗಳನ್ನು ತಯಾರಿಸುವ ಸ್ವಾತಂತ್ರ್ಯ ಹೊಂದಿವೆ.
ಎಸ್‌ಇಸಿಐಯ ಮಂಡಳಿ ನಿವೃತ್ತ ಐಎಎಸ್ ಅಧಿಕಾರಿಯ ನೇತೃತ್ವದಲ್ಲಿದೆ. ಇತರ ಸರಕಾರಿ ವಲಯದ ಅಧಿಕಾರಿಗಳು ನಿರ್ದೇಶಕರಾಗಿರುತ್ತಾರೆ. ನವೀಕರಿಸಬಹುದಾದ ಇಂಧನ ಸಚಿವಾಲಯದಿಂದ ಇಬ್ಬರು ಹಿರಿಯ ಅಧಿಕಾರಿಗಳಿರುತ್ತಾರೆ. ಈಗ ಮಹಾರಾಷ್ಟ್ರದ ಮಾಜಿ ಸಚಿವ, ಬಿಜೆಪಿ ಸದಸ್ಯ ರಾಜ್‌ಕುಮಾರ್ ಸುದಮ್ ಬಡೋಲೆ ಸ್ವತಂತ್ರ ನಿರ್ದೇಶಕರಾಗಿದ್ದಾರೆ.
2018ರಲ್ಲಿ ಸೌರ ವಿದ್ಯುತ್ ಘಟಕಗಳನ್ನು ಉತ್ಪಾದಿಸುವ ಕಂಪೆನಿಗಳಿಂದ ಬೃಹತ್ ಪ್ರಮಾಣದ ಸೌರಶಕ್ತಿಯನ್ನು ಖರೀದಿಸಲು ಎಸ್‌ಇಸಿಐ ನಿರ್ಧರಿಸಿತು. ಮತ್ತು ಅದನ್ನು ಉತ್ಪಾದನೆ-ಸಂಯೋಜಿತ ಹರಾಜು ಎಂದು ಕರೆಯಿತು. ಭಾರತದಲ್ಲಿ, ಎರಡೂ ವ್ಯವಹಾರಗಳಲ್ಲಿ ಕೆಲವೇ ಕೆಲವರು ಮಾತ್ರ ಇದ್ದಾರೆ ಮತ್ತು ಎಸ್‌ಇಸಿಐ ನಿರೀಕ್ಷಿಸುವ ಮಟ್ಟದಲ್ಲಿ ಕಾರ್ಯನಿರ್ವಹಿಸುವವರು ಇನ್ನೂ ಕಡಿಮೆ.ಅದರಲ್ಲಿ ಅದಾನಿ ಗ್ರೂಪ್ ಕೂಡ ಒಂದು. ಈ ಟೆಂಡರ್‌ಗಳನ್ನು ದೇಶೀಯ ಸೌರ ಉತ್ಪಾದನಾ ಕೈಗಾರಿಕೆಗಳಿಗೆ ಬೆಂಬಲವಾಗಿರಲಿದೆ ಎಂದು ಬಿಂಬಿಸಲಾಗಿತ್ತಾದರೂ, ಅಂಥ ಕಂಪೆನಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಅದು ಏನನ್ನೂ ಮಾಡಲಿಲ್ಲ.
ಟೆಂಡರ್ ಷರತ್ತುಗಳನ್ನು 2019ರವರೆಗೆ ಹಲವು ಬಾರಿ ತಿರುಚಲಾಯಿತು. ಈ ಟೆಂಡರ್ ಅಡಿಯಲ್ಲಿ ರಾಜ್ಯ ಸರಕಾರಗಳು ವಿದ್ಯುತ್ ಖರೀದಿಸಲು ಅನುವು ಮಾಡಿಕೊಡುವುದಕ್ಕೆ ಎಸ್‌ಇಸಿಐ ಒಂದೂವರೆ ವರ್ಷಕ್ಕೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಎಸ್‌ಇಸಿಐ ಹರಾಜಿಗೆ ಮೂರು ಬಿಡ್‌ಗಳು ಬಂದವು. ಅದಾನಿ ಗ್ರೂಪ್, ಅಝುರೆ ಗ್ರೂಪ್ ಮತ್ತು ನವಯುಗ್ ಗ್ರೂಪ್‌ನಿಂದ ಬಿಡ್‌ಗಳು ಬಂದವು.
ಅದಾನಿ ಗ್ರೂಪ್ ಪರವಾಗಿ ಎಂಥ ಆಟ ಆಡಲಾಯಿತೆಂದರೆ, ನವಯುಗ ಗ್ರೂಪ್ ಸೌರಶಕ್ತಿಯನ್ನು ಪ್ರತೀ ಯೂನಿಟ್ ವಿದ್ಯುತ್‌ಗೆ 2.93 ರೂ.ಗೆ ಮಾರಾಟ ಮಾಡಲು ಮುಂದಾಗಿದ್ದಾಗ, ಪ್ರತೀ ಯೂನಿಟ್‌ಗೆ ರೂ. 2.92ಕ್ಕೆ ವಿದ್ಯುತ್ ಮಾರಾಟ ಮಾಡಲು ಅದಾನಿ ಬಿಡ್ ಮಾಡಿದರು. ಅಝುರೆ ಕೂಡ ಅದೇ ಬೆಲೆಗೆ 15 ನಿಮಿಷ ಮುಂಚೆ ಬಿಡ್ ಮಾಡಿತ್ತು. ಈ ಎರಡು ಕಂಪೆನಿಗಳಿಗೆ ಬಿಡ್ ಸಿಕ್ಕಿತು. ಹರಾಜು ಕರೆಯುವ ವೇಳೆ ಹಲವಾರು ಷರತ್ತುಗಳಿದ್ದವು. ಅದರಂತೆ, 30 ತಿಂಗಳ ಅವಧಿಯಲ್ಲಿ ವಾರ್ಷಿಕವಾಗಿ ಕನಿಷ್ಠ 500 ಎಂಡಬ್ಲ್ಯು ಸಾಮರ್ಥ್ಯದ ಸೌರ ವಿದ್ಯುತ್ ಘಟಕಗಳನ್ನು ಉತ್ಪಾದಿಸುವ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಬಿಡ್‌ದಾರರು ಬದ್ಧರಾಗಿರಬೇಕಿತ್ತು.
ಮುಂದಿನ 25 ವರ್ಷಗಳವರೆಗೆ ಬೃಹತ್ ಪ್ರಮಾಣದಲ್ಲಿ ವಿದ್ಯುತ್ ಖರೀದಿಸುವ ಭರವಸೆ ಮೂಲಕ ಸೋಲಾರ್ ಘಟಕ ಸ್ಥಾಪಿಸುವ ಕಂಪೆನಿಯ ವೆಚ್ಚದ ಮೇಲೆ ಸಬ್ಸಿಡಿ ಆಕರ್ಷಣೆ ಇತ್ತು. ವಿಶಿಷ್ಟ ಬಿಡ್ ಷರತ್ತುಗಳ ಕಾರಣದಿಂದಾಗಿ, ಅದಾನಿ ಮತ್ತು ಅಝುರೆ ಗ್ರೂಪ್ ಟೆಂಡರ್ ಅನ್ನು ಪಡೆದ ಬೆಲೆಯಲ್ಲಿ 25 ವರ್ಷಗಳಲ್ಲಿ 1.5 ಲಕ್ಷ ಕೋಟಿ ರೂ. ಖಚಿತವಾದ ಆದಾಯವನ್ನು ಗಳಿಸಬಹುದು. ಇದರಲ್ಲಿ ಅದಾನಿ ಗ್ರೂಪ್ ಅಝುರೆಗಿಂತ ದುಪ್ಪಟ್ಟು ಗಳಿಸುತ್ತದೆ.
ಅದಾನಿ ಮತ್ತು ಅಝುರೆ ಸಾಮಾನ್ಯವಾಗಿ ಪ್ರಚಲಿತದಲ್ಲಿರುವ ಸೌರ ವಿದ್ಯುತ್ ದರಗಳಿಂದ ಅನಾಯಾಸವಾಗಿ 22,000 ಕೋಟಿ ರೂ ಆದಾಯವನ್ನು ಗಳಿಸಲಿದ್ದಾರೆ ಎಂದು ಸಂಶೋಧಕರು ಅಂದಾಜಿಸಿದ್ದಾರೆ. ಸಂಶೋಧಕರ ಲೆಕ್ಕಾಚಾರದ ಪ್ರಕಾರ, ದಿ ಕಲೆಕ್ಟಿವ್ ಅಂದಾಜಿನ ಪ್ರಕಾರ, ಪ್ರತೀ ಯೂನಿಟ್‌ಗೆ 2.92 ರೂ.ನಂತೆ ಬಿಡ್ ಅನ್ನು ಗೆದ್ದಿರುವ ಬೆಲೆಯ ಅನುಸಾರ, ಎರಡೂ ಸಮೂಹಗಳು 25 ವರ್ಷಗಳಲ್ಲಿ 1.5 ಲಕ್ಷ ಕೋಟಿ ರೂ.ಗೂ ಹೆಚ್ಚು ಆದಾಯವನ್ನು ಗಳಿಸುತ್ತವೆ.
ಅಮೆರಿಕ ನ್ಯಾಯಾಲಯದ ಆರೋಪಗಳ ಪ್ರಕಾರ, ಎರಡು ಖಾಸಗಿ ಸಂಸ್ಥೆಗಳು ಎಸ್‌ಇಸಿಐನೊಂದಿಗೆ ವಿದ್ಯುತ್ ಖರೀದಿ ಒಪ್ಪಂದಗಳಿಗೆ ಸಹಿ ಹಾಕಲು ರಾಜ್ಯ ಸರಕಾರಿ ಅಧಿಕಾರಿಗಳಿಗೆ 2,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಲಂಚವನ್ನು ನೀಡಿವೆ.
ಒಪ್ಪಂದಗಳಿಗೆ ಸಹಿ ಹಾಕುವ ಮೂಲಕ ರಾಜ್ಯಗಳು ಮುಂದಿನ ಎರಡೂವರೆ ದಶಕಗಳವರೆಗೆ ವಿದ್ಯುತ್ ಖರೀದಿಸುತ್ತವೆ. ಇಲ್ಲಿ ಇನ್ನೂ ಒಂದು ವಿಷಯವಿದೆ. ಯೂನಿಟ್‌ಗೆ 2.92 ರೂ ನಂತೆ ಬಿಡ್ ಪಡೆದ ಒಂದೂವರೆ ವರ್ಷಗಳ ನಂತರ, ಸಂಸ್ಥೆಗಳು ತಾವಾಗಿಯೇ ಸುಂಕಗಳನ್ನು 2.54 ಮತ್ತು 2.42ಕ್ಕೆ ತಗ್ಗಿಸಿದವು. ಅಂದರೆ, ಅವರು ಗೆದ್ದಿದ್ದ ದರ ಸಮರ್ಥನೀಯವಲ್ಲ ಎಂಬುದಕ್ಕೆ ಇದು ಸ್ಪಷ್ಟ ಸಾಕ್ಷಿ. ಕೊಳ್ಳುವ ಶಕ್ತಿಯ ಹೊಸ ಬೆಲೆಗಳನ್ನು ಈಗ ಕೇಂದ್ರ ಸರಕಾರದ ಪವರ್ ರೆಗ್ಯುಲೇಟರ್ ಅನುಮೋದಿಸಬೇಕಾಗಿದೆ. ಯಾಕೆ ನವಯುಗ್ ಅನ್ನು ಹೊರಗಿಡಲಾಯಿತು ಎಂಬುದು ಪ್ರಶ್ನೆ.
ನವಯುಗ್ ಗ್ರೂಪ್‌ನ ನವಯುಗ್ ಇಂಜಿನಿಯರಿಂಗ್ ಪ್ರತೀ ಯೂನಿಟ್ ವಿದ್ಯುತ್‌ಗೆ ಒಂದು ಪೈಸೆಯಷ್ಟು ಹರಾಜಿನಲ್ಲಿ ಸೋತಿದ್ದರೂ, ಈ ಮಧ್ಯೆ ಅದು ಸದ್ದಿಲ್ಲದೆ ಮತ್ತೊಂದು ಒಪ್ಪಂದವನ್ನು ಮಾಡುತ್ತಿತ್ತು.
ಭಾರತದ ಎರಡನೇ ಅತಿ ದೊಡ್ಡ ಖಾಸಗಿ ಬಂದರು ಆಗಿರುವ ಕೃಷ್ಣಪಟ್ಟಣಂ ಬಂದರಿನಲ್ಲಿ ತನ್ನ ಪಾಲನ್ನು ಮಾರಾಟ ಮಾಡಲು ಕಂಪೆನಿ ಅದಾನಿ ಗ್ರೂಪ್‌ನೊಂದಿಗೆ ಮಾತುಕತೆ ನಡೆಸುತ್ತಿತ್ತು. ಆಗಸ್ಟ್ 2019 ರಲ್ಲಿ ಬಂದರಿನ ಮಾತುಕತೆಯ ಸುದ್ದಿ ಹೊರಬಂದಿತು. ಆ ಹೊತ್ತಿಗೆ ನವಯುಗ್ ಗ್ರೂಪ್ ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಗೆ ರೂ. 45 ಕೋಟಿ ದೇಣಿಗೆ ನೀಡಿದ್ದೂ ಆಗಿತ್ತು. ನವೆಂಬರ್ 2019 ರ ಹೊತ್ತಿಗೆ, ಬಂದರಿನ ಮಾತುಕತೆಗಳು ಇನ್ನೂ ನಡೆಯುತ್ತಿರುವಾಗ, ಅದು ಎಸ್‌ಇಸಿಐಯ ಮುಂದೆ ಅದಾನಿ ಗ್ರೂಪ್‌ಗೆ ಪ್ರತಿಸ್ಪರ್ಧಿಯಾಗಿ ಬಿಡ್ ಮಾಡಿತು.
ಅದಾನಿ ಗ್ರೂಪ್ ಮತ್ತು ಅಝುರೆ ಸೋಲಾರ್ ಬಿಡ್ ಅನ್ನು ಗೆದ್ದವು ಮತ್ತು ಒಂದು ತಿಂಗಳ ನಂತರ ಅದಾನಿ ಸಮೂಹವು ನವಯುಗ್ ಗುಂಪಿನೊಂದಿಗೆ ಬಂದರು ಒಪ್ಪಂದವನ್ನು ಮಾಡಿಕೊಂಡ ಬಗ್ಗೆ ವರದಿ ಬಂತು. ಜನವರಿ 2020ರ ಹೊತ್ತಿಗೆ, ಒಪ್ಪಂದವನ್ನು ಔಪಚಾರಿಕವಾಗಿ ಘೋಷಿಸಲಾಯಿತು.
ಅದಾನಿ ಗ್ರೂಪ್ ನವಯುಗ್ ಸಮೂಹದಿಂದ ಬಂದರಿನಲ್ಲಿ ಶೇ.75 ಈಕ್ವಿಟಿಯನ್ನು, 3,375 ಕೋಟಿ ರೂ.ಗೆ ಪಡೆದಿದೆ. ಬಿಡ್ ದಾರರ ನಡುವೆಯೇ ಹೀಗೆ ಒಳ ಒಪ್ಪಂದಗಳಾಗಿ ವ್ಯವಹಾರ ಕುದುರಿದ್ದಲ್ಲಿ, ಅಂಥ ಬಿಡ್‌ಗಳ ಬಗ್ಗೆ ತನಿಖೆಯ ಅಗತ್ಯವಿದೆ ಎಂದು ವರದಿ ಪ್ರತಿಪಾದಿಸಿದೆ.
ಬಿಡ್ ದಾರರು ಸ್ಪಷ್ಟವಾಗಿ ಪರಸ್ಪರ ಸಂಬಂಧ ಹೊಂದಿದ್ದರೆ ಅಂತಹ ತನಿಖೆ ಹೆಚ್ಚು ಮುಖ್ಯವಾಗುತ್ತದೆ. ಆದರೆ ನವಯುಗ್ ಮತ್ತು ಅದಾನಿ ಗ್ರೂಪ್‌ಗಳು ಅಂಥ ತನಿಖೆಯಿಂದ ತಪ್ಪಿಸಿಕೊಳ್ಳುವಲ್ಲಿಯೂ ಗೆದ್ದಿವೆ.
ಕಾನೂನುಬದ್ಧವಾಗಿ, ಬಂದರು ಒಪ್ಪಂದವನ್ನು ಜನವರಿ 2020ರಲ್ಲಿ ಅಧಿಕೃತವಾಗಿ ಮೊಹರು ಮಾಡಿದ ನಂತರ ಮತ್ತು ಸೆಬಿಗೆ ಘೋಷಿಸಿದ ನಂತರ ಇಬ್ಬರೂ ಒಟ್ಟಾದರು. ನವಯುಗ್ ಪ್ರತಿಸ್ಪರ್ಧಿಯಾಗಿ ಕಾರ್ಯನಿರ್ವಹಿಸಿದ ಸೌರ ವಿದ್ಯುತ್ ಹರಾಜಿನಲ್ಲಿ ಅದಾನಿ ಗ್ರೂಪ್ ಗೆದ್ದ ಕೆಲ ವಾರಗಳ ನಂತರ ಇದು ನಡೆಯಿತು.
ಸೋಲಾರ್ ಹರಾಜಿಗೆ ಪ್ರತಿಸ್ಪರ್ಧಿಗಳಾಗಿ ಪರಸ್ಪರರ ವಿರುದ್ಧ ಹರಾಜು ಹಾಕುತ್ತಿದ್ದರೂ ಸಹ, ಬಂದರು ಒಪ್ಪಂದಕ್ಕಾಗಿ ಇಬ್ಬರೂ ತಿಂಗಳುಗಟ್ಟಲೆ ಮಾತುಕತೆ ನಡೆಸುತ್ತಿದ್ದರು ಎಂಬುದು ಸಾರ್ವಜನಿಕವಾಗಿ ತಿಳಿದಿರುವ ಅಂಶ. ಆದರೂ ಎಸ್‌ಇಸಿಐ ಇವರ ಬಗ್ಗೆ ತಕರಾರೆತ್ತದೆ ಉಳಿದುಬಿಟ್ಟಿತು.
ಜನಸಾಮಾನ್ಯರ ಮೇಲೆ ಹೊರೆಯಾಗದ ರೀತಿಯಲ್ಲಿ ವಿದ್ಯುತ್ ವಿತರಿಸಲು ಅನುಕೂಲವಾಗುವಂತೆ ದರ ನಿಗದಿಯಾಗಬೇಕಿತ್ತು.
ಆದರೆ ಸಿಕ್ಕಾಪಟ್ಟೆ ಬೆಲೆಗೆ ವಿದ್ಯುತ್ ಖರೀದಿಸುವ, ಅದಾನಿ ಕಂಪೆನಿಗೆ ಲಾಭ ಮಾಡಿಕೊಡುವ ಕೆಲಸ ನಡೆಯಿತು. ಹೀಗೇಕೆ ಅದಾನಿಗೆ ಅನಗತ್ಯ ಲಾಭ ಮಾಡಿಕೊಡುವುದಕ್ಕೆ ಕಸರತ್ತು ಮಾಡಲಾಯಿತು? ಇಂಥ ಹಲವು ಪ್ರಶ್ನೆಗಳು ಉಳಿದುಬಿಡುತ್ತವೆ.