ಉತ್ತರಾಖಂಡ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರಿಗೆ, ಚೆಸ್, ಲೂಡೊ ಬೋರ್ಡ್, ಕಾರ್ಡ್ಗಳನ್ನು ಒದಗಿಸಲು ಚಿಂತನೆ
Photo: PTI
ಹೊಸದಿಲ್ಲಿ: ಉತ್ತರಾಖಂಡದ ಸಿಲ್ಕ್ಯಾರ ಎಂಬಲ್ಲಿ ಸುರಂಗವೊಂದು ಕುಸಿದ ಪರಿಣಾಮ ಕಳೆದ 12 ದಿನಗಳಿಂದ ಅದರೊಳಗೆ ಸಿಲುಕಿರುವ 41 ಮಂದಿ ಕಾರ್ಮಿಕರನ್ನು ಉತ್ತಮ ಮನಃಸ್ಥಿತಿಯಲ್ಲಿರಿಸಲು ಅವರಿಗೆ ಬೋರ್ಡ್ ಗೇಮ್ಗಳು ಮತ್ತು ಪ್ಲೇಯಿಂಗ್ ಕಾರ್ಡ್ಗಳನ್ನು ಒದಗಿಸಲು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸಲು ಕಾರ್ಯಾಚರಣೆ ಹಗಲಿರುಳು ಭರದಿಂದ ಸಾಗಿದ್ದರೂ ಹಲವಾರು ಅಡೆತಡೆಗಳು ಆಗಾಗ ಎದುರಾಗುತ್ತಿರುವುದರಿಂದ ರಕ್ಷಣೆ ವಿಳಂಬವಾಗಿದೆ.
ಕಾರ್ಮಿಕರನ್ನು ತಲುಪಲು ಇನ್ನೇನು ಕೆಲವೇ ಗಂಟೆಗಳಿವೆ ಎನ್ನುವಾಗ ಗುರುವಾರ ಡ್ರಿಲ್ಲಿಂಗ್ ಯಂತ್ರವನ್ನಿರಿಸಲಾಗಿರುವ ಕಟ್ಟೆಯಲ್ಲಿ ಕಾಣಿಸಿಕೊಂಡ ಬಿರುಕಿನಿಂದಾಗಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಾಗಿ ಬಂದಿದೆ.
ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವ ಸ್ಥಳದಲ್ಲಿರುವ ಮನಃಶಾಸ್ತ್ರಜ್ಞ ಡಾ ರೋಹಿತ್ ಗೊಂಡ್ವಾಲ್ ಸುದ್ದಿಗಾರರ ಜೊತೆ ಮಾತನಾಡಿ “ಒತ್ತಡಮುಕ್ತರಾಗಿರಲು ಕಾರ್ಮಿಕರಿಗೆ ಲೂಡೋ, ಚೆಸ್ ಬೋರ್ಡ್ಗಳು ಅಥವಾ ಕಾರ್ಡ್ಗಳನ್ನು ಒದಗಿಸಲು ಯೋಚಿಸಲಾಗುತ್ತಿದೆ,” ಎಂದಿದ್ದಾರೆ.
ಸುರಂಗದಲ್ಲಿ ಸಿಲುಕಿರುವ ಎಲ್ಲಾ 41 ಕಾರ್ಮಿಕರಿಗೆ ಯಾವುದೇ ಸಮಸ್ಯೆಯಿಲ್ಲವಾದರೂ ಅವರು ಆರೋಗ್ಯಕರವಾಗಿರಬೇಕು ಮತ್ತು ಒತ್ತಡಮುಕ್ತರಾಗಿರುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಅವರು ಸಮಯ ಕಳೆಯಲು “ಕಳ್ಳ-ಪೊಲೀಸ್” ಆಟ ಆಡುತ್ತಿರುವುದಾಗಿ ಹಾಗೂ ಪ್ರತಿದಿನ ಯೋಗ ಮತ್ತು ವ್ಯಾಯಾಮ ಮಾಡುತ್ತಿರುವುದಾಗಿ ತಿಳಿಸಿದ್ದಾರೆಂದು ಗೊಂಡ್ವಾಲ್ ಹೇಳಿದ್ದಾರೆ.
ವೈದ್ಯರ ತಂಡವೊಂದು ಪ್ರತಿದಿನ ಅವರೊಂದಿಗೆ ಸಂವಹನ ನಡೆಸಿ ಅವರ ದೈಹಿಕ, ಮಾನಸಿಕ ಸ್ಥಿತಿಯನ್ನು ಅವಲೋಕಿಸುತ್ತಿದೆ.