ಕೆ ಕವಿತಾ ಜಾಮೀನಿನ ಕುರಿತು ಹೇಳಿಕೆ | ಕ್ಷಮೆಯಾಚಿಸಿದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ
ರೇವಂತ್ ರೆಡ್ಡಿ (Photo: PTI)
ಹೈದರಾಬಾದ್: ದಿಲ್ಲಿ ಮದ್ಯ ನೀತಿ ಪ್ರಕರಣದಲ್ಲಿ ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ನಾಯಕಿ ಕೆ.ಕವಿತಾಗೆ ಜಾಮೀನು ಮಂಜೂರು ಮಾಡಿರುವ ಕುರಿತು ತಾವು ನೀಡಿರುವ ಹೇಳಿಕೆಗೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಶುಕ್ರವಾರ ಕ್ಷಮೆಯಾಚಿಸಿದ್ದಾರೆ.
ಕವಿತಾಗೆ ಜಾಮೀನು ಪಡೆಯಲು ಬಿಜೆಪಿ ಮತ್ತು ಬಿಆರ್ಎಸ್ ನಡುವಿನ 'ಡೀಲ್' ಕಾರಣ ಎಂದು ಅವರು ಪ್ರತಿಕ್ರಿಯೆ ನೀಡಿದ್ದರು. ಅವರ ಹೇಳಿಕೆಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ಒಂದು ದಿನದ ನಂತರ ರೇವಂತ್ ರೆಡ್ಡಿಯವರು ತಮ್ಮ ಹೇಳಿಕೆಗೆ ಕ್ಷಮೆ ಕೇಳಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿನ ಪೋಸ್ಟ್ ನಲ್ಲಿ, ರೇವಂತ್ ರೆಡ್ಡಿ ಅವರು ಭಾರತೀಯ ನ್ಯಾಯಾಂಗದಲ್ಲಿ "ಅತ್ಯಂತ ಗೌರವ ಮತ್ತು ಸಂಪೂರ್ಣ ನಂಬಿಕೆ" ಹೊಂದಿದ್ದೇನೆ ಎಂದು ಬರೆದಿದ್ದಾರೆ.
"ನಾನು ನ್ಯಾಯಾಂಗ ಪ್ರಕ್ರಿಯೆಯಲ್ಲಿ ದೃಢ ನಂಬಿಕೆಯುಳ್ಳವನು ಎಂದು ನಾನು ಪುನರುಚ್ಚರಿಸುತ್ತೇನೆ. ನಾನು ಬೇಷರತ್ತಾಗಿ ಪತ್ರಿಕಾ ವರದಿಗಳಲ್ಲಿ ಬಿಂಬಿತವಾಗಿರುವ ಹೇಳಿಕೆಗಳಿಗೆ ನನ್ನ ವಿಷಾದ ವ್ಯಕ್ತಪಡಿಸುತ್ತೇನೆ" ಎಂದು ತೆಲಂಗಾಣ ಮುಖ್ಯಮಂತ್ರಿ ಪೋಸ್ಟ್ ಮಾಡಿದ್ದಾರೆ.