ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕಾರ
ಹೈದರಾಬಾದ್: ಹೈದರಾಬಾದಿನ ಎಲ್‍ಬಿ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಅದ್ದೂರಿ ಕಾರ್ಯಕ್ರಮದಲ್ಲಿ ರೇವಂತ್ ರೆಡ್ಡಿ ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ರೇವಂತ್ ರೆಡ್ಡಿ ಅವರೊಂದಿಗೆ ಉತ್ತಮ್ ಕುಮಾರ್ ರೆಡ್ಡಿ, ಶ್ರೀಧರ್ ಬಾಬು, ಪೊನ್ನಂ ಪ್ರಭಾಕರ್, ಕೋಮಟಿರೆಡ್ಡಿ ವೆಂಕಟರ್ ರೆಡ್ಡಿ, ದಾಮೋದರ್ ರಾಜಾನರಸಿಂಹ, ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ, ದಾನ ಅನುಸೂಯ, ತುಮ್ಮಲ ನಾಗೇಶ್ವರ್ ರಾವ್, ಕೊಂಡ ಸುರೇಖಾ ಹಾಗೂ ಜೂಪಲ್ಲಿ ಕೃಷ್ಣ ರಾವ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮಲ್ಲು ಭಟ್ಟಿ ವಿಕ್ರಮಾರ್ಕ ಅವರನ್ನು ತೆಲಂಗಾಣದ ಉಪ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿದ್ದು, ಅವರೂ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಹಾಗೂ ತೆಲಂಗಾಣ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉಪಸ್ಥಿತರಿದ್ದರು.
ಸುಮಾರು ಒಂದು ಲಕ್ಷ ಮಂದಿ ಈ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.