ದೇಶದಲ್ಲಿ ಅಕ್ಕಿ ದಾಸ್ತಾನು 20 ವರ್ಷಗಳಲ್ಲೇ ಅತ್ಯಧಿಕ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಸರ್ಕಾರದ ಬಳಿ ಇರುವ ಅಕ್ಕಿ ದಾಸ್ತಾನು ನವೆಂಬರ್ 1ರ ವೇಳೆಗೆ 300 ಲಕ್ಷ ಟನ್ ತಲುಪಲಿದೆ. ಇದು ಎರಡು ದಶಕಗಳಲ್ಲೇ ಭಾರತದ ಆಹಾರ ನಿಗಮದ ಬಳಿ ಇರುವ ಗರಿಷ್ಠ ಅಕ್ಕಿ ದಾಸ್ತಾನು ಪ್ರಮಾಣವಾಗಿದೆ ಎನ್ನುವ ಅಂಶ ವೆಬ್ ಸೈಟ್ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.
ರಾಜ್ಯ ಸರ್ಕಾರಗಳು ತಮ್ಮ ಯೋಜನೆಗಳಿಗಾಗಿ ನೇರ ಎಫ್ ಸಿಐನಿಂದ ಅಕ್ಕಿ ಖರೀದಿಸಲು ಕೇಂದ್ರ ಸರ್ಕಾರ ಅವಕಾಶ ನೀಡಿದ್ದರೂ ಹಾಗೂ 23 ಲಕ್ಷ ಟನ್ಗಳನ್ನು ಎಥೆನಾಲ್ ಡಿಸ್ಟಿಲರಿಗಳಿಗೆ ಮಾರಾಟ ಮಾಡಿದ್ದರೂ, ಈ ದೊಡ್ಡ ಪ್ರಮಾಣದ ದಾಸ್ತಾನು ವಿಲೇವಾರಿ ಮಾಡುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.
ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ ಎಫ್ಸಿಐನಲ್ಲಿ 299 ಲಕ್ಷ ಟನ್ ಅಕ್ಕಿ ಸಂಗ್ರಹವಿದೆ ಹಾಗೂ 13 ಲಕ್ಷ ಟನ್ ಅಕ್ಕಿ ಮಿಲ್ಲರ್ಗಳಿಂದ ಲಭ್ಯವಿದೆ. ಸರ್ಕಾರದ ಬಫರ್ ಸ್ಟಾಕ್ ನಿಯಮಾವಳಿಯ ಪ್ರಕಾರ, ಎಫ್ಸಿಐ 102.5 ಲಕ್ಷ ಟನ್ ಆಹಾರಧಾನ್ಯವನ್ನು ಆಹಾರ ಭದ್ರತಾ ಯೋಜನೆಗ ಸಲುವಾಗಿ ಮತ್ತು ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳಿಗಾಗಿ ದಾಸ್ತಾನು ಮಾಡುವುದು ಕಡ್ಡಾಯ.
ಸರ್ಕಾರಿ ಏಜೆನ್ಸಿಗಳು ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡಿರುವುದರಿಂದ ಅಕ್ಕಿ ದಾಶ್ತಾನು ಹೆಚ್ಚಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕಳೆದ ವರ್ಷದಿಂದ ಕೇಂದ್ರ ಸರ್ಕಾರ ಕೇಂದ್ರೀಯ ದಾಸ್ತಾನಿನಿಂದ ಅಕ್ಕಿಯನ್ನು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಜತೆಗೆ ಬಾಸ್ಮತಿ ಅಕ್ಕಿ ಹೊರತಾಗಿ ರಫ್ತನ್ನು ನಿರ್ಬಂಧಿಸಲಾಗಿದೆ. ಆಹಾರ ಹಣದುಬ್ಬರ ಹಾಗೂ ಮಳೆ ಅಭಾವ ಪರಿಸ್ಥಿತಿಯನ್ನು ನಿಭಾಯಿಸುವ ಉದ್ದೇಶದಿಂದ ಬಿಳಿ ಹಾಗೂ ಕುಚ್ಚಲಕ್ಕಿಯ ರಫ್ತಿನ ಮೇಲೆ ಭಾರಿ ಸುಂಕವನ್ನು ವಿಧಿಸಿರುವುದು ದಾಸ್ತಾನು ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ.
ಈ ಮಧ್ಯೆ ಪಂಜಾಬ್ ಹಾಗೂ ಹರ್ಯಾಣದಲ್ಲಿ ಭತ್ತದ ಖರೀದಿ ಭರದಿಂದ ಸಾಗಿದೆ ಎಂದು ಆಹಾರ ಸಚಿವಾಲಯ ಹೇಳಿದೆ. ರಾಜ್ಯದ ಈ ಎರಡು ಪ್ರಮುಖ ಭತ್ತ ಬೆಳೆಯುವ ರಾಜ್ಯಗಳಿಂದ ವರ್ಷಕ್ಕೆ ಕ್ರಮವಾಗಿ 185 ಲಕ್ಷ ಟನ್ ಹಾಗೂ 60 ಲಕ್ಷ ಟನ್ ಭತ್ತವನ್ನು ಪ್ರಸಕ್ತ ಋತುವಿನಲ್ಲಿ ಖರೀದಿಸುವ ನಿರೀಕ್ಷೆ ಇದೆ.