ಕುರಿ ಮೇಯಿಸುವ ಹಕ್ಕು : ಚೀನಿ ಸೈನಿಕರೊಂದಿಗೆ ಲಡಾಖ್ ನ ಕುರಿಗಾಹಿಗಳ ವಾಗ್ವಾದ
screengrab | Photo : NDTV
ಹೊಸದಿಲ್ಲಿ: ತಮ್ಮ ಕುರಿಗಳನ್ನು ಮೇಯಿಸುವ ಹಕ್ಕಿಗೆ ತಡೆ ಒಡ್ಡಲಾಗುತ್ತಿರುವುದರಿಂದ ಕ್ರುದ್ಧರಾಗಿರುವ ಲಡಾಖ್ ನ ಕುರಿಗಾಹಿಗಳ ಗುಂಪೊಂದು ಭಾರತ-ಚೀನಾ ಗಡಿ ಬಳಿ ಚೀನಿ ಸೈನಿಕರೊಂದಿಗೆ ವಾಗ್ವಾದಕ್ಕಿಳಿದ ಘಟನೆ ಬುಧವಾರ ನಡೆದಿದೆ.
ಕುರಿಗಾಹಿಗಳು ಮತ್ತು ಚೀನಿ ಸೈನಿಕರ ನಡುವಿನ ವಾಗ್ವಾದದ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಕುರಿಗಾಹಿಗಳ ಧೈರ್ಯವನ್ನು ಹಲವರು ಪ್ರಶಂಸಿಸಿದ್ದಾರೆ.
2020ರಲ್ಲಿ ಲಡಾಖ್ ನ ಗಲ್ವಾನ್ ಜಿಲ್ಲೆಯಲ್ಲಿ ಭಾರತ-ಚೀನಾ ಬಿಕ್ಕಟ್ಟಿನ ಬಳಿಕ ಆ ಪ್ರದೇಶದಲ್ಲಿ ತಮ್ಮ ಜಾನುವಾರುಗಳನ್ನು ಮೇಯಿಸುವುದನ್ನು ಕುರಿಗಾಹಿಗಳು ನಿಲ್ಲಿಸಿದ್ದರು. ಆದರೆ ಈಗ ಅವರು ಆ ಪ್ರದೇಶಕ್ಕೆ ಮರಳಿದ್ದು, ಚೀನಿ ಸೇನೆಯು ಅವರನ್ನು ತಡೆಯುತ್ತಿದೆ.
ಕುರಿಗಾಹಿಗಳ ಧೈರ್ಯವನ್ನು ಶ್ಲಾಘಿಸಿರುವ ಚುಷುಲ್ ಕೌನ್ಸಿಲರ್ ಕೊಂಚೊಕ್ ಸ್ಟಾಂಝಿನ್ ಅವರು,‘ನಮ್ಮ ಭೂಮಿಯನ್ನು ರಕ್ಷಿಸಲು ಯಾವಾಗಲೂ ಮುಂದಾಗುತ್ತಿರುವ ಮತ್ತು ದೇಶದ ಎರಡನೇ ರಕ್ಷಕ ಶಕ್ತಿಯಾಗಿ ನಿಂತಿರುವವರಿಗೆ ನನ್ನ ವಂದನೆಗಳು’ ಎಂದು ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ಹೇಳಿದ್ದಾರೆ.
‘ನೀವು ನಿಂತಿರುವ ಪ್ರದೇಶವು ನಮ್ಮ ಅಲೆಮಾರಿಗಳ ಜಾನುವಾರುಗಳನ್ನು ಮೇಯಿಸುವ ಭೂಮಿ ಎಂದು ಹೇಳುವ ಮೂಲಕ ನಮ್ಮ ಸ್ಥಳೀಯ ಜನರು ಚೀನಿ ಸೈನ್ಯದ ಮುಂದೆ ತಮ್ಮ ಶೌರ್ಯವನ್ನು ಪ್ರದರ್ಶಿಸಿರುವುದು ಶ್ಲಾಘನೀಯವಾಗಿದೆ. ನಮ್ಮದೇ ಭೂಪ್ರದೇಶದಲ್ಲಿ ನಮ್ಮ ಅಲೆಮಾರಿಗಳು ತಮ್ಮ ಜಾನುವಾರುಗಳನ್ನು ಮೇಯಿಸುವುದನ್ನು ಚೀನಿ ಸೇನೆಯು ತಡೆಯುತ್ತಿದೆ. ಗಡಿರೇಖೆಯ ಕುರಿತು ವಿಭಿನ್ನ ದೃಷ್ಟಿಕೋನಗಳಿಂದಾಗಿ ಇದು ಎಂದಿಗೂ ಮುಗಿಯದ ಪ್ರಕ್ರಿಯೆಯಾಗಿರುವಂತಿದೆ ’ ಎಂದು ಸ್ಟಾಂಝಿನ್ ಬರೆದಿದ್ದಾರೆ.
ಭಾರತೀಯ ಸೇನೆಯು ಪೂರ್ವ ಲಡಾಖ್ ನ ಗಡಿ ಪ್ರದೇಶಗಳಲ್ಲಿಯ ಸಾಂಪ್ರದಾಯಿಕ ಹುಲ್ಲುಗಾವಲುಗಳು ಮತ್ತು ಪ್ಯಾಂಗಾಂಗ್ ಸರೋವರದ ಉತ್ತರ ದಂಡೆಯಲ್ಲಿ ತಮ್ಮ ಜಾನುವಾರುಗಳನ್ನು ಮೇಯಿಸಲು ಕುರಿಗಾಹಿಗಳಿಗೆ ಮತ್ತು ಅಲೆಮಾರಿಗಳಿಗೆ ಅನುಕೂಲವನ್ನು ಕಲ್ಪಿಸಿದ್ದು, ಇದು ಧನಾತ್ಮಕ ಪ್ರಭಾವವನ್ನು ಬೀರಿದೆ. ಇಂತಹ ಬಲವಾದ ನಾಗರಿಕ-ಮಿಲಿಟರಿ ಸಂಬಂಧಗಳಿಗಾಗಿ ಮತ್ತು ಗಡಿ ಪ್ರದೇಶದಲ್ಲಿಯ ಜನರ ಹಿತಾಸಕ್ತಿಗಳನ್ನು ನೋಡಿಕೊಳ್ಳುತ್ತಿರುವುದಕ್ಕಾಗಿ ಭಾರತೀಯ ಸೇನೆಗೆ ನನ್ನ ಧನ್ಯವಾದಗಳು ’ಎಂದೂ ಸ್ಟಾಂಝಿನ್ ಹೇಳಿದ್ದಾರೆ.