ಧನಕರ್-ಖರ್ಗೆ ನಡುವೆ ಮಾತಿನ ಚಕಮಕಿ : ರಾಜ್ಯಸಭಾ ಕಲಾಪ ಸೋಮವಾರಕ್ಕೆ ಮುಂದೂಡಿಕೆ
Photo : PTI
ಹೊಸದಿಲ್ಲಿ : ಅವಿಶ್ವಾಸ ಮತ ನಿರ್ಣಯ ಚರ್ಚೆಯ ಸಂದರ್ಭದಲ್ಲಿ ರಾಜ್ಯಸಭಾಧ್ಯಕ್ಷ ಜಗದೀಪ್ ಧನಕರ್ ಹಾಗೂ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ನಡುವೆ ಶುಕ್ರವಾರವೂ ಮಾತಿನ ಚಕಮಕಿ ಮುಂದುವರಿದಿದ್ದರಿಂದ, ಮೇಲ್ಮನೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ವಿರೋಧ ಪಕ್ಷಗಳ ಸಂಸದರೊಂದಿಗೆ ಮಾತಿನ ಚಕಮಕಿ ನಡೆಯುವಾಗ, ಒಂದು ಹಂತದಲ್ಲಿ, "ನಾನು ದೇಶಕ್ಕಾಗಿ ಸಾಯಲೂ ಸಿದ್ಧ" ಎಂದು ಜಗದೀಪ್ ಧನಕರ್ ವಿಪಕ್ಷಗಳ ಸಂಸದರನ್ನುದ್ದೇಶಿಸಿ ಭಾವುಕವಾಗಿ ಹೇಳಿದ ಘಟನೆಯೂ ನಡೆಯಿತು.
"ನಾನು ರೈತನ ಮಗ. ನಾನು ದೇಶಕ್ಕಾಗಿ ಸಾಯಲೂ ಸಿದ್ಧ. ರೈತನ ಮಗನೇಕೆ ಉಪ ರಾಷ್ಟ್ರಪತಿ ಆಸನದಲ್ಲಿ ಕುಳಿತಿದ್ದಾನೆ ಎಂಬುದೇ ಸಂಸತ್ತಿನಲ್ಲಿ ನಿಮ್ಮ 24 ಗಂಟೆಗಳ ಸಮಸ್ಯೆಯಾಗಿದೆ. ನಾನು ನಿಮಗೆ ಸಾಕಷ್ಟು ಗೌರವ ನೀಡಿದ್ದೇನೆ. ನಿಮ್ಮ ವರ್ತನೆಯನ್ನೊಮ್ಮೆ ನೋಡಿಕೊಳ್ಳಿ. ನೀವು ಏನು ಮಾತನಾಡುತ್ತಿದ್ದೀರಿ ಎಂಬುದನ್ನು ನೋಡಿಕೊಳ್ಳಿ. ನಾನು ಸಾಕಷ್ಟು ಸಹಿಸಿದ್ದೇನೆ" ಎಂದು ಖರ್ಗೆ ಹಾಗೂ ಇನ್ನಿತರ ಕಾಂಗ್ರೆಸ್ ಸಂಸದರಿಗೆ ಕೈಮುಗಿದು ಧನಕರ್ ಮನವಿ ಮಾಡಿದರು.
ಅವಿಶ್ವಾಸ ನಿರ್ಣಯ ಮಂಡಿಸುವುದು ವಿಪಕ್ಷಗಳ ಹಕ್ಕಾಗಿದೆ. ಆದರೆ, ನೀವು ಸಂವಿಧಾನವನ್ನು ಉಲ್ಲಂಘಿಸುತ್ತಿದ್ದೀರಿ ಎಂದು ಆರೋಪಿಸಿದ ಜಗದೀಪ್ ಧನಕರ್, "ನಿಮ್ಮ ನಿರ್ಣಯವನ್ನು ಎಲ್ಲಿ ತಡೆ ಹಿಡಿಯಲಾಗಿದೆ? ನಿಮ್ಮ ನಿರ್ಣಯವನ್ನು 14 ದಿನಗಳ ನಂತರ ಮತಕ್ಕೆ ಹಾಕಲಾಗುತ್ತದೆ. ಹೀಗಿದ್ದೂ, ನೀವು ಹೊರಗೆ ಇಂತಹ ಹೇಳಿಕೆಗಳನ್ನು ನೀಡುತ್ತೀರಿ" ಎಂದು ಧನಕರ್ ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ, ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ನೀವು ಯಾವಾಗ ಬೇಕಾದರೂ ನನ್ನನ್ನು ಭೇಟಿಯಾಗಬಹುದು ಅಥವಾ ನಿಮಗೆ ನನ್ನನ್ನು ಭೇಟಿಯಾಗಲು ಸಾಧ್ಯವಾಗದಿದ್ದರೆ, ನಾನೇ ನಿಮ್ಮನ್ನು ಭೇಟಿ ಮಾಡುತ್ತೇನೆ ಎಂದು ಸಂಸದರಿಗೆ ಧನಕರ್ ಮನವಿ ಮಾಡಿದರು. ಆದರೆ, ಧನಕರ್ ಹಾಗೂ ಖರ್ಗೆ ನಡುವೆ ಪರಸ್ಪರ ಕೂಗಾಟ ನಡೆದಿದ್ದರಿಂದ, ಸದನದಲ್ಲಿ ಗದ್ದಲದ ವಾತಾವರಣ ಏರ್ಪಟ್ಟಿತು. ಆಗ ನಾನು ದುರ್ಬಲನಾಗಲಾರೆ ಎಂದು ಘೋಷಿಸಿದ ಧನಕರ್, ವಿರೋಧ ಪಕ್ಷಗಳು ರೈತ ವಿರೋಧಿ ಮನಸ್ಥಿತಿಯನ್ನು ಹೊಂದಿವೆ ಎಂದು ದೂರಿದರು.
ನಂತರ, ರಾಜ್ಯಸಭಾ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.