ಗಾಂಧಿ ಸ್ಥಾಪಿಸಿದ ಗುಜರಾತ್ ವಿದ್ಯಾಪೀಠದಲ್ಲಿ ಆರೆಸ್ಸೆಸ್ ಶತಮಾನೋತ್ಸವ ಕಾರ್ಯಕ್ರಮ!
ಗಾಂಧಿ ಮರಿ ಮೊಮ್ಮಗ ತುಷಾರ್ ಗಾಂಧಿ ಸಹಿತ ಜನಪರ ಹೋರಾಟಗಾರರ ಕಾರ್ಯಕ್ರಮಕ್ಕೆ ಈ ಹಿಂದೆ ಅನುಮತಿ ನಿರಾಕರಿಸಿದ್ದ ವಿವಿ
ಸಾಂದರ್ಭಿಕ ಚಿತ್ರ | PC : PTI
ಅಹಮದಾಬಾದ್: ಮಹಾತ್ಮ ಗಾಂಧಿ ಸ್ಥಾಪಿಸಿದ ಗುಜರಾತ್ ವಿದ್ಯಾಪೀಠದಲ್ಲಿ ಇದೇ ರವಿವಾರ ತನ್ನ ಕ್ಯಾಂಪಸ್ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಈ ಕಾರ್ಯಕ್ರಮವು ಆರೆಸ್ಸೆಸ್ ಶತಮಾನೋತ್ಸವ ಆಚರಣೆಯ ಭಾಗವಾಗಿದ್ದು, ಇದಕ್ಕಾಗಿ ಈಗಾಗಲೇ ಆಹ್ವಾನ ಪತ್ರಿಕೆ ಕಳುಹಿಸಲಾಗಿದೆ ಎಂದು deccanherald.com ವರದಿ ಮಾಡಿದೆ.
ಕ್ಯಾಂಪಸ್ನಲ್ಲಿ ಕಾರ್ಯಕ್ರಮ ನಡೆಯುತ್ತಿದೆ ಎಂದು ಖಚಿತಪಡಿಸಿದ ಆರೆಸ್ಸೆಸ್ ನ ಮೂಲವು, ಅನುಮತಿ ನೀಡುವಂತೆ ವಿವಿಯ ಉಪಕುಲಪತಿ ಹರ್ಷದ್ ಪಟೇಲ್ಗೆ ಮನವಿ ಮಾಡಲಾಗಿತ್ತು ಎಂದು ಹೇಳಿದರು.
ಆದರೆ ಈ ಕುರಿತು ಪ್ರತಿಕ್ರಿಯೆ ನೀಡಲು ಉಪಕುಲಪತಿ ಹರ್ಷದ್ ಪಟೇಲ್ ಅವರನ್ನು ಸಂಪರ್ಕಿಸಿದರೂ ಅವರಿಂದ ಯಾವುದೇ ಪ್ರತಿಕ್ರಿಯೆಗೆ ಸಿಗಲಿಲ್ಲ ಎಂದು deccanherald.com ವರದಿ ಮಾಡಿದೆ.
ಈ ಹಿಂದೆ ಗಾಂಧಿಯವರ ಮರಿ ಮೊಮ್ಮಗ ತುಷಾರ್ ಗಾಂಧಿ ಸೇರಿದಂತೆ ಜನಪರ ಹೋರಾಟಗಾರರಿಗೆ ವಿಶ್ವವಿದ್ಯಾಲಯವು ಅನುಮತಿ ನಿರಾಕರಿಸಿತ್ತು ಎನ್ನಲಾಗಿದೆ.
1920 ರಲ್ಲಿ ಸ್ಥಾಪಿಸಲಾದ ವಿದ್ಯಾಪೀಠವು ಡೀಮ್ಡ್ ವಿಶ್ವವಿದ್ಯಾನಿಲಯವಾಗಿದೆ. ಇದು ಸಬರಮತಿ ಆಶ್ರಮದ ಸಮೀಪದಲ್ಲಿದೆ. ಫೆಬ್ರವರಿ, 2023 ರಲ್ಲಿ, ಬಿಜೆಪಿ ಮಾಧ್ಯಮ ವಿಭಾಗದ ಸಂಚಾಲಕರಾದ ಪಟೇಲ್ ಅವರನ್ನು ಅದರ ಉಪಕುಲಪತಿಯಾಗಿ ನೇಮಿಸಲಾಯಿತು. ಅದಕ್ಕೂ ಒಂದು ವರ್ಷದ ಮೊದಲು ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಅದರ ಕುಲಪತಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.
ಆಗಿನ ಉಪಕುಲಪತಿ ರಾಜೇಂದ್ರ ಖಿಮಾನಿ ಮತ್ತು ಇತರ ಅಧಿಕಾರಿಗಳು ದೇವವ್ರತ್ ಅವರ ಹೆಸರನ್ನು ಕುಲಪತಿಯಾಗಿ ಪ್ರಸ್ತಾಪಿಸಿದ ನಂತರ ವಿಶ್ವವಿದ್ಯಾನಿಲಯದಲ್ಲಿ ಬಿಕ್ಕಟ್ಟು ಉಂಟಾಗಿತ್ತು. ಅನೇಕ ಟ್ರಸ್ಟಿಗಳು ಗುಜರಾತ್ ರಾಜ್ಯಪಾಲರಿಗೆ ಬಹಿರಂಗ ಪತ್ರ ಬರೆದು ರಾಜೀನಾಮೆ ನೀಡಿದರು. ಈ ಪ್ರಸ್ತಾಪವನ್ನು "ತೀವ್ರ ರಾಜಕೀಯ ಒತ್ತಡ" ಮತ್ತು "ಗಾಂಧಿಯವರ ಮೌಲ್ಯಗಳು, ವಿಧಾನಗಳು ಮತ್ತು ಅಭ್ಯಾಸಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ" ಎಂದು ಆರೋಪಿಸಲಾಗಿತ್ತು.
"ವಿದ್ಯಾಪೀಠದಲ್ಲಿ ನಡೆಯುತ್ತಿರುವ 'ಸಮಾಜ, ಶಕ್ತಿ, ಸಂಗಮ' ಕಾರ್ಯಕ್ರಮದ ಬಗ್ಗೆ ವಿವಾದವನ್ನು ಸೃಷ್ಟಿಸಲಾಗುತ್ತಿದೆ" ಎಂದು ಆರೆಸ್ಸೆಸ್ ನ ಗುಜರಾತ್ ವಕ್ತಾರ ವಿಜಯ್ ಠಾಕೆರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಕಾರ್ಯಕ್ರಮವು ಆರೆಸ್ಸೆಸ್ ನ ಶತಮಾನೋತ್ಸವ ವರ್ಷಾಚರಣೆಯ ಭಾಗವಾಗಿದ್ದು, ರಾಜ್ಯಾದ್ಯಂತ ಇಂತಹ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.