ತಾರತಮ್ಯ ಇರುವ ತನಕ ಮೀಸಲಾತಿ ಮುಂದುವರಿಯಬೇಕು ಎಂದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್
ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ (PTI)
ಹೊಸದಿಲ್ಲಿ: ಸಮಾಜದಲ್ಲಿ ತಾರತಮ್ಯ ಇರುವ ತನಕ ಮೀಸಲಾತಿ ಮುಂದುವರಿಯಬೇಕು ಎಂದು ಹೇಳಿರುವ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್, ತಮ್ಮ ಸಂಘಟನೆಯು ಸಂವಿಧಾನದಡಿಯಲ್ಲಿ ಒದಗಿಸಲಾದ ಮೀಸಲಾತಿಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ನಾಗ್ಪುರ್ನಲ್ಲಿ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
“ನಾವು ನಮ್ಮ ಸಹ-ಮನುಷ್ಯರನ್ನು ಸಾಮಾಜಿಕ ವ್ಯವಸ್ಥೆಯಲ್ಲಿ ಹಿಂದೆ ಇರಿಸಿದ್ದೇವೆ. ನಾವು ಅವರ ಬಗ್ಗೆ ಕಾಳಜಿ ವಹಿಸಲಿಲ್ಲ. ಇದು 2000 ವರ್ಷಗಳ ತನಕ ಮುಂದುವರಿಯಿತು, ಅವರಿಗೆ ಸಮಾನತೆ ಒದಗಿಸುವ ತನಕ ಕೆಲ ವಿಶೇಷ ಪರಿಹಾರಗಳು ಬೇಕಿದೆ, ಮೀಸಲಾತಿ ಅವುಗಳಲ್ಲೊಂದು. ತಾರತಮ್ಯ ಇರುವ ತನಕ ಮೀಸಲಾತಿ ಮುಂದುವರಿಯಬೇಕು. ಸಂವಿಧಾನ ಒದಗಿಸಿರುವ ಈ ಮೀಸಲಾತಿಯನ್ನು ಆರೆಸ್ಸೆಸ್ಸಿನಲ್ಲಿರುವ ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ,” ಎಂದು ಅವರು ಹೇಳಿದರು.
“ಸಮಾಜದ ಕೆಲ ವರ್ಗಗಳು 2000 ವರ್ಷಗಳ ತನಕ ತಾರತಮ್ಯ ಎದುರಿಸಿದ್ದರೆ, ನಾವು (ತಾರತಮ್ಯ ಎದುರಿಸದೇ ಇದ್ದವರು) ಸ್ವಲ್ಪ ಸಮಸ್ಯೆಯನ್ನು ಇನ್ನೂ 200 ವರ್ಷಗಳ ತನಕ ಏಕೆ ಎದುರಿಸಬಾರದು?” ಎಂದು ಅವರು ಕೇಳಿದರು.
ಮರಾಠ ಸಮುದಾಯದ ಮೀಸಲಾತಿ ಹೋರಾಟ ತೀವ್ರಗೊಂಡ ಸಂದರ್ಭದಲ್ಲಿ ಭಾಗವತ್ ಅವರ ಹೇಳಿಕೆ ಬಂದಿದೆ.
ಅಖಂಡ ಭಾರತದ್ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಈಗಿನ ಯುವ ಪೀಳಿಗೆಗೆ ಸಾಕಷ್ಟು ವಯಸ್ಸಾಗುವ ಮುನ್ನ ಅದು ಸಾಕಾರಗೊಳ್ಳಲಿದೆ ಎಂದರು. ಭಾರತದಿಂದ 1947ರಲ್ಲಿ ಪ್ರತ್ಯೇಕಗೊಂಡವರು ತಮ್ಮ ನಿರ್ಧಾರಕ್ಕೆ ವಿಷಾದಿಸಿ ಭಾರತದೊಂದಿಗಿರಲು ಬಯಸುತ್ತಾರೆ ಎಂದು ಅವರು ಹೇಳಿದರು.
“1950 ರಿಂದ 2002 ತನಕ ಆರೆಸ್ಸೆಸ್ ತನ್ನ ನಾಗ್ಪುರ್ ಮುಖ್ಯ ಕಾರ್ಯಾಲಯ ಮಹಲ್ನಲ್ಲಿ ರಾಷ್ಟ್ರಧ್ವಜ ಹಾರಿಸಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು “ಪ್ರತಿವರ್ಷ ಆಗಸ್ಟ್ 15 ಮತ್ತು ಜನವರಿ 26ರಂದು ರಾಷ್ಟ್ರಧ್ವಜವನ್ನು ನಾವೆಲ್ಲಿದ್ದರೂ ಹಾರಿಸುತ್ತೇವೆ. ನಾಗ್ಪುರದ ಮಹಲ್ ಮತ್ತು ರೇಶಿಂಬಾಗ್ನಲ್ಲಿರುವ ನಮ್ಮ ಕ್ಯಾಂಪಸ್ನಲ್ಲೂ ಧ್ವಜಾರೋಹಣ ನೆರವೇರುತ್ತದೆ. ಜನರು ಈ ಪ್ರಶ್ನೆ ನಮಗೆ ಕೇಳಬಾರದು,” ಎಂದು ಭಾಗವತ್ ಹೇಳಿದರು.