ಬಿಜೆಪಿಗೆ ಹಿಂದೂಗಳ ಮತ ಸೆಳೆಯಲು 65 ಸಂಘಟನೆಗಳ ಜತೆಗೂಡಿ ಆರೆಸ್ಸೆಸ್ ಮಹಾ ಸಾಹಸ
PC: x.com/narendramodi
ಮುಂಬೈ; ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ತುರುಸಿನ ಸ್ಪರ್ಧೆ ಏರ್ಪಟ್ಟಿರುವ ನಡುವೆಯೇ ಹಿಂದೂ ಮತಗಳನ್ನು ಬಿಜೆಪಿ ಮತ್ತು ಮಹಾಯುತಿ ಕೂಟದ ಪರವಾಗಿ ಸೆಳೆಯಲು ರಾಷ್ಟ್ರೀಯ ಸ್ವಯಂಸೇವಕ ಸಂಘ 65 ಮಿತ್ರ ಸಂಘಟನೆಗಳ ಜತೆ ಸೇರಿ ಪ್ರಯತ್ನಿಸುತ್ತಿದೆ. 'ಸಜಗ್ ರಹೋ' ('ಜಾಗರೂಕರಾಗಿರಿ, ಎಚ್ಚರವಾಗಿರಿ') ಎಂಬ ಅಭಿಯಾನದ ಮೂಲಕ ಹಿಂದೂ ಮತಗಳು ವಿಭಜನೆಯಾಗದಂತೆ ತಡೆಯಲು ಮತ್ತು ಬಿಜೆಪಿ ಪರ ಧ್ರುವೀಕರಣಗೊಳಿಸಲು ಮುಂದಾಗಿದೆ.
ಆದಿತ್ಯನಾಥ್ ಅವರ ಬಟೇಂಗೆ ತೋ ಕಟೇಂಗೆ, ಪ್ರಧಾನಿ ಮೋದಿಯವರ ಏಕ್ ಹೇ ತೋ ಸೇಫ್ ಹೇ ಎಂಬ ಘೋಷಣೆಗಳಿಗೆ ಪೂರಕವಾಗಿ ಸಜಗ್ ರಹೋ ಅಭಿಯಾನ ನಡೆಯುತ್ತಿದೆ. ಮಾಲೆಗಾಂವ್ ನಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಂ ಮತಗಳು ಧ್ರುವೀಕರಣಗೊಂಡ ಕಾರಣದಿಂದ ಬಿಜೆಪಿ ಅಭ್ಯರ್ಥಿ ಅಲ್ಪ ಅಂತರದಿಂದ ಸೋಲಬೇಕಾಯಿತು ಎನ್ನುವುದನ್ನು ಬಿಂಬಿಸಲಾಗುತ್ತಿದೆ.
ಆದರೆ ಈ ಅಭಿಯಾನ ಯಾರನ್ನೂ ಗುರಿ ಮಾಡಿಲ್ಲ. ಬದಲಾಗಿ ಹಿಂದೂಗಳಲ್ಲಿನ ಜಾತಿ ವಿಭಜನೆಯನ್ನು ನಿರ್ಮೂಲನೆ ಮಾಡುವ ಗುರಿ ಹೊಂದಿದೆ ಎನ್ನುವುದು ಆರೆಸ್ಸೆಸ್ ಮುಖಂಡರ ಸಮರ್ಥನೆ. ಈ ಸಂದೇಶವನ್ನು ಪಸರಿಸುವ ಉದ್ದೇಶದಿಂದ ಆರೆಸ್ಸೆಸ್ ಮತ್ತು 65 ಸಹ ಸಂಘಟನೆಗಳು ನೂರಾರು ಸಭೆಗಳನ್ನು ಆಯೋಜಿಸಿದೆ ಎಂದು ಬಿಜೆಪಿ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.
ಚಾಣಕ್ಯ ಪ್ರತಿಷ್ಠಾನ, ಮಾತಂಗ ಸಾಹಿತ್ಯ ಪರಿಷತ್, ರಣರಾಗಿಣಿ ಸೇವಾ ಭಾವಿಸಂಸ್ಥಾ ದಂತಹ ಸಂಘಟನೆಗಳು ಇದಕ್ಕೆ ಕೈಜೋಡಿಸಿವೆ. ಸಂಘದ ಎಲ್ಲ ನಾಲ್ಕು ಪ್ರಾಂತ್ಯಗಳಲ್ಲಿ ಅಂದರೆ ಕೊಂಕಣ, ದೇವಗಿರಿ, ಪಶ್ಚಿಮ ಮಹಾರಾಷ್ಟ್ರ ಹಾಗೂ ವಿದರ್ಭಗಳಲ್ಲಿ ಇ ಅಭಿಯಾನ ನಡೆಯುತ್ತಿದ್ದು, ಶಾಖಾ ಮಟ್ಟದ ಸಭೆಗಳನ್ನು ನಡೆಸಲಾಗುತ್ತಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಧೂಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಅಭ್ಯರ್ಥಿ ಶೋಭಾ ಬಚ್ಚವ್ 5117 ಮತಗಳ ಅಂತರದಿಂದ ಗೆಲುವು ಸಾಧಿಸಿದ ಮಾಲೆಗಾಂವ್ ಮಾದರಿಯನ್ನು ಗುರಿಯಾಗಿಸಿ ಹಿಂದೂಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಕೇವಲ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿ ಐದು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮುನ್ನಡೆ ಸಾಧಿಸಿದರೂ ಸೋಲು ಅನುಭವಿಸಿದ್ದರು. ಬಿಜೆಪಿಯ ಸುಭಾಷ್ ಭರ್ಮೆ ಐದು ಕ್ಷೇತ್ರಗಳಲ್ಲಿ 189210 ಮತಗಳ ಮುನ್ನಡೆ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಒಂದೇ ಕ್ಷೇತ್ರದಲ್ಲಿ 194327 ಮತಗಳ ಮುನ್ನಡೆ ಪಡೆದು ಗೆಲುವಿನ ನಗೆ ಬೀರಿದ್ದರು. ಈ ಕ್ಷೇತ್ರದಲ್ಲಿ ಬಿಜೆಪಿ ಕೆವಲ 4542 ಮತ ಗಳಿಸಿತ್ತು.