ಮೋದಿ ಸರಕಾರದಡಿ ಆರ್ಟಿಐ ಕಾಯ್ದೆ ಅವಸಾನದತ್ತ ಸಾಗುತ್ತಿದೆ: ಕಾಂಗ್ರೆಸ್
ಜೈರಾಮ್ ರಮೇಶ್ (photo: PTI)
ಹೊಸದಿಲ್ಲಿ: ಮಾಹಿತಿ ಹಕ್ಕು (ಆರ್ಟಿಐ) ಕಾಯ್ದೆಯ ಅನುಷ್ಠಾನದ 18ನೇ ವರ್ಷಾಚರಣೆ ಸಂದರ್ಭದಲ್ಲಿ ಗುರುವಾರ ಕಾಂಗ್ರೆಸ್ ಪಕ್ಷವು, ಮೋದಿ ಸರಕಾರವು ಕಾಯ್ದೆಯನ್ನು ದುರ್ಬಲಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದು, ಅದು ತ್ವರಿತ ಅವಸಾನದತ್ತ ಸಾಗುತ್ತಿದೆ ಎಂದು ಆರೋಪಿಸಿದೆ.
‘‘ಇಂದು ಐತಿಹಾಸಿಕ ಆರ್ಟಿಐ ಕಾಯ್ದೆ ಅನುಷ್ಠಾನದ 18ನೇ ವರ್ಷಾಚರಣೆಯಾಗಿದೆ. ಕನಿಷ್ಠ 2014ರವರೆಗೆ ಅದು ಪರಿವರ್ತಕವಾಗಿತ್ತು. ಆ ಬಳಿಕ ಮೋದಿ ಸರಕಾರವು,ಕಾಯ್ದೆಯನ್ನು ಮತ್ತು ಅದರ ನಿಬಂಧನೆಗಳನ್ನು ದುರ್ಬಲಗೊಳಿಸಲು,‘ಪ್ರಧಾನಿಯ ಡೋಲು ವಾದಕರನ್ನು ’ಅದರ ಆಯುಕ್ತರನ್ನಾಗಿ ನೇಮಿಸಲು ಮತ್ತು ಮನವಿಗಳನ್ನು ತಿರಸ್ಕರಿಸಲು ನಿರಂತರ ಪ್ರಯತ್ನಗಳನ್ನು ಮಾಡಿದೆ ’’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಅವರು ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.
‘ಆರ್ಟಿಐ ಕಾಯ್ದೆಯು ಬೆಳಕಿಗೆ ತಂದಿದ್ದ ವಿಷಯಗಳು ಸ್ವತಃ ಪ್ರಧಾನಿಗೆ ಅತ್ಯಂತ ಮುಜುಗರವನ್ನುಂಟು ಮಾಡಿದ್ದು ಅದರ ತಿದ್ದುಪಡಿಗೆ ನಾಂದಿ ಹಾಡಿತ್ತು. ಈ ಪೈಕಿ ಕೆಲವು ತಿದ್ದುಪಡಿಗಳನ್ನು ನಾನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದೇನೆ. ಆರ್ಟಿಐ ಕಾಯ್ದೆಯು ತ್ವರಿತವಾಗಿ ಅವಸಾನದತ್ತ ಸಾಗುತ್ತಿರುವುದರಿಂದ ಅರ್ಜಿಯ ವಿಚಾರಣೆ ಶೀಘ್ರವೇ ನಡೆಯುತ್ತದೆ ಎಂದು ಈಗಲೂ ನಾನು ಆಶಿಸಿದ್ದೇನೆ’ ಎಂದು ಅವರು ಹೇಳಿದ್ದಾರೆ.