ರಾಜ್ಯದಲ್ಲಿ ಕಾನೂನಿನ ಪ್ರಭುತ್ವವಿದೆಯೇ ಅಥವಾ ತೋಳ್ಬಲ ಮೇಲುಗೈ ಸಾಧಿಸಿದೆಯೇ? : ಬಾಂಬೆ ಹೈಕೋರ್ಟ್
► ಅನಧಿಕೃತ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳಲು ಆಡಳಿತದ ವೈಫಲ್ಯಕ್ಕೆ ಅಸಮಾಧಾನ
ಬಾಂಬೆ ಹೈಕೋರ್ಟ್ | PTI
ಮುಂಬೈ: ನವೀ ಮುಂಬೈಯ ನಿವೇಶನವೊಂದರಲಿರುವ ಅಕ್ರಮ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾಗಿರುವುದಕ್ಕಾಗಿ ರಾಜ್ಯ ಸರಕಾರಿ ಸ್ವಾಮ್ಯದ ನಗರ ಯೋಜನಾ ಏಜೆನ್ಸಿ 'ಸಿಡ್ಕೋ' ವನ್ನು ಬಾಂಬೆ ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ರಾಜ್ಯದಲ್ಲಿ ಕಾನೂನಿನ ಪ್ರಭುತ್ವ ನೆಲೆಸಿದೆಯೇ ಇಲ್ಲಾ ತೋಳ್ಬಲ ಮೇಲುಗೈ ಸಾಧಿಸಿದೆಯೇ ಎಂದು ಬಾಂಬೆ ಹೈಕೋರ್ಟ್ ಪ್ರಶ್ನಿಸಿದೆ.
ಅನಧಿಕೃತ ಕಟ್ಟಡಗಳ ವಿರುದ್ಧ ಕಠಿಣವಾದ ಕ್ರಮವನ್ನು ಕೈಗೊಳ್ಳಲು ನಗರ ಮತ್ತು ಕೈಗಾರಿಕಾ ಅಭಿವೃದ್ಧಿ ನಿಗಮ (ಸಿಡ್ಕೋ) ಅಧಿಕಾರಿಗಳು ಆಸಕ್ತಿ ಹೊಂದಿಲ್ಲವೆಂದು ನ್ಯಾಯಮೂರ್ತಿಗಳಾದ ಎ.ಎಸ್.ಗಡ್ಕರಿ ಹಾಗೂ ಕಮಲ್ ಅವರನ್ನೊಳಗೊಂಡ ನ್ಯಾಯಪೀಠವು ಇತ್ತೀಚೆಗೆ ಹೊರಡಿಸಿದ ಆದೇಶದಲ್ಲಿ ಅಸಮಾಧಾನ ವ್ಯಕ್ತಪಡಿಸಿದೆ.
ನವೀ ಮುಂಬೈಯ ಅಕ್ರಮ ಕಟ್ಟಡಗಳ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳಲು ಮುಂದಾದಾಗ ತಮಗೆ ಬೊಕಾಡ್ವಿರಾ ಗ್ರಾಮದ ಸರಪಂಚರು ಬೆದರಿಕೆಯೊಡ್ಡುತ್ತಿದ್ದರೆಂದು ಸಿಡ್ಕೊ ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿದ್ದಾರೆ.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲವು ಅಧಿಕಾರಿಗಳು ಕಾನೂನುಬದ್ಧವಾಗಿ ಕರ್ತವ್ಯಗಳನ್ನು ನಿರ್ವಹಿಸುವಾಗ, ಸೂಕ್ತವಾದ ಪೊಲೀಸ್ ರಕ್ಷಣೆಯನ್ನು ಪಡೆಯುವ ಹಕ್ಕನ್ನು ಅವರು ಹೊಂದಿದ್ದಾರೆ ಮತ್ತು ಅಕ್ರಮಗಳು ನಡೆಯುವುದನ್ನು ತಡೆಗಟ್ಟುವುದು ಹಾಗೂ ಕಾನೂನಿನ ಪ್ರಭುತ್ವವನ್ನು ಸ್ಥಾಪಿಸುವುದು ಅವರ ಕರ್ತವ್ಯವಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.
ನಾವಿರುವ ರಾಜ್ಯದಲ್ಲಿ ಕಾನೂನಿನ ಪ್ರಭುತ್ವವಿದೆಯೇ ಇಲ್ಲಾ ತೋಳ್ಬಲ ಮೇಲುಗೈ ಸಾಧಿಸಿದೆಯೇ ಎಂಬುದನ್ನು ವಿಫಲರಾಗಿದ್ದೇವೆ ಎಂದು ಹೈಕೋರ್ಟ್ ತಿಳಿಸಿದೆ.
ನವಿ ಮುಂಬೈಯಲ್ಲಿ ತನ್ನ ಒಡೆತನದಲ್ಲಿರುವ 123 ಚದರ ಅಡಿ ಮೀಟರ್ ಜಾಗದಲ್ಲಿ ದೀಪಕ್ ಪಾಟೀಲ್ ಎಂಬವರು ಸ್ಥಾಪಿಸಿದ ಅನಧಿಕೃತ ಕಟ್ಟಡಗಳನ್ನು ನೆಲಸಮಗೊಳಿಸುವಲ್ಲಿ ಸಿಡ್ಕೋಗೆ ನಿರ್ದೇಶನ ನೀಡುವಂತೆ ಕೋರಿ 2016ರಲ್ಲಿ ದಂಪತಿಯೊಂದು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಕೈಗೆತ್ತಿಕೊಂಡಿತ್ತು.
ಒಂದು ವಾರದ ಅವಧಿಯೊಳಗೆ ಫಿರ್ಯಾದಿದಾರರ ಜಾಗದಲ್ಲಿರುವ ಅನಧಿಕೃತ ನಿರ್ಮಾಣಗಳನ್ನು ತೆಗೆದುಹಾಕಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೆಂದು ನ್ಯಾಯಾಲಯವು ಸಿಡ್ಕೊಗೆ ನಿರ್ದೇಶನ ನೀಡಿದೆ.