ಎನ್ಡಿಎಗೆ ನಿತೀಶ್ ಸೇರ್ಪಡೆ ವದಂತಿ ; ಬಿಹಾರಕ್ಕೆ ಧಾವಿಸಿದ ಹಿರಿಯ ಬಿಜೆಪಿ ನಾಯಕರು
ನಿತೀಶ್ ಕುಮಾರ್ | Photo: NDTV
ಪಾಟ್ನಾ : ಸಮ್ಮಿಶ್ರ ಸರಕಾರದ ಪಾಲುದಾರ ಪಕ್ಷಗಳಾದ ಜೆಡಿಯು ಮತ್ತು ಆರ್ಜೆಡಿ ನಡುವೆ ಬಿರುಕು ಶನಿವಾರ ಇನ್ನಷ್ಟು ದೊಡ್ಡದಾಗಿದ್ದು, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸುವ ಸಮಯ ಸನ್ನಿಹಿತವಾಗಿರುವಂತಿದೆ. ಬಿಜೆಪಿಯ ಬೆಂಬಲದೊಂದಿಗೆ ನೂತನ ಸರಕಾರ ರಚನೆಗೆ ಅವರು ಹಕ್ಕು ಮಂಡಿಸಬಹುದು.
ಹಠಾತ್ ಬೆಳವಣಿಗೆಗಳಿಂದಾಗಿ ಬಿಹಾರದಲ್ಲಿ ರಾಜಕೀಯ ಅನಿಶ್ಚಿತತೆಯು ತೀವ್ರಗೊಂಡಿದ್ದು, ಎಲ್ಲರ ಕಣ್ಣುಗಳು ರಾಜಭವನದ ಮೇಲೆ ನೆಟ್ಟಿವೆ. ಮೈತ್ರಿಯು ಅಸ್ತಿತ್ವ ಕಳೆದುಕೊಂಡರೆ ನಿತೀಶ್ ಮತ್ತು ಆರ್ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಇಬ್ಬರೂ ಸರಕಾರ ರಚನೆಗೆ ಹಕ್ಕು ಮಂಡಿಸಬಹುದು.
ಇತ್ತಿಚಿನ ಬೆಳವಣಿಗೆಯಲ್ಲಿ ನಿತೀಶ್ ಶನಿವಾರ ಎಲ್ಲ ಜೆಡಿಯು ಶಾಸಕರ ಸಭೆಯನ್ನು ನಡೆಸಿದ್ದು, ಭವಿಷ್ಯದ ಕ್ರಮಗಳ ಕುರಿತು ಅವರೊಂದಿಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.
ನಿತೀಶ್ ಹುದ್ದೆಗೆ ರಾಜೀನಾಮೆ ಸಲ್ಲಿಸಿ ರವಿವಾರವೇ ಎಂಟನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಬಹುದು ಎಂದು ಅನಧಿಕೃತ ಮೂಲಗಳು ತಿಳಿಸಿವೆ.
ನಿತೀಶ್ ನೂತನ ಸರಕಾರವನ್ನು ರಚಿಸಿದರೆ ಹಿರಿಯ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿಯವರು ಮತ್ತೊಮ್ಮೆ ಉಪಮುಖ್ಯಮಂತ್ರಿಯಾಗಬಹುದು. ನಿತೀಶ್ ನೇತೃತ್ವದ ಹಿಂದಿನ ಎನ್ಡಿಎ ಸರಕಾರದಲ್ಲಿಯೂ ಅವರು ಉಪಮುಖ್ಯಮಂತ್ರಿಯಾಗಿದ್ದರು.
ರವಿಶಂಕರ್ ಪ್ರಸಾದ್ ಸೇರಿದಂತೆ ಹಿರಿಯ ಬಿಜೆಪಿ ನಾಯಕರ ದಂಡು ಪಾಟ್ನಾಕ್ಕೆ ಬಂದಿಳಿದಿದ್ದು, ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಂಡಿದ್ದರು. ನೂತನ ಸರಕಾರದ ಸಂಭಾವ್ಯ ರಚನೆಗೆ ಮುನ್ನ ಬಿಜೆಪಿ ನಿತೀಶ್ ಗೆ ಬೆಂಬಲ ಸೂಚಿಸಿ ತನ್ನ ಶಾಸಕರಿಂದ ಪತ್ರಗಳನ್ನು ಸಂಗ್ರಹಿಸುತ್ತಿದೆ ಎಂದೂ ವರದಿಗಳು ತಿಳಿಸಿವೆ.
ಈ ನಡುವೆ ಆರ್ಜೆಡಿಯೂ ಮಹಾ ಘಟಬಂಧನ ಸರಕಾರವು ಪತನಗೊಂಡರೆ ಪರ್ಯಾಯ ಸರಕಾರ ರಚನೆಗೆ ಪ್ರಯತ್ನಗಳನ್ನು ನಡೆಸುತ್ತಿದೆ.
ಲಾಲೂ ಪ್ರಸಾದ್ ಶನಿವಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ನಿವಾಸದಲ್ಲಿ ಆರ್ಜೆಡಿ ಶಾಸಕಾಂಗ ಪಕ್ಷದ ಸಭೆಯನ್ನು ನಡೆಸಿದ್ದಾರೆ. ಸಭೆಯಲ್ಲಿ ಪಕ್ಷವು ಮುಂದಿನ ಕ್ರಮವನ್ನು ನಿರ್ಧರಿಸುವ ಅಧಿಕಾರವನ್ನು ಲಾಲು ಪ್ರಸಾದ್ಗೆ ನೀಡಿದೆ.
ಆರ್ಜೆಡಿ ಕಾಂಗ್ರೆಸ್ ಮತ್ತು ಮೂರು ಎಡಪಕ್ಷಗಳೊಂದಿಗೆ 114 ಶಾಸಕರ ಬೆಂಬಲವನ್ನು ಹೊಂದಿದ್ದು, 243 ಸದಸ್ಯಬಲದ ವಿಧಾನ ಸಭೆಯಲ್ಲಿ 122ರ ಬಹುಮತದ ಸಂಖ್ಯೆಯನ್ನು ತಲುಪಲು ಅದಕ್ಕೆ ಇನ್ನೂ ಎಂಟು ಶಾಸಕರ ಅಗತ್ಯವಿದೆ. ಈ ಮ್ಯಾಜಿಕ್ ಸಂಖ್ಯೆಯನ್ನು ಸಾಧಿಸಲು ಆರ್ಜೆಡಿಯು ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿಯವರ ಹಿಂದುಸ್ಥಾನ ಆವಾಮಿ ಮೋರ್ಚಾ (ಎಚ್ಎಎಂ)ವನ್ನು ಓಲೈಸುವ ಪ್ರಯತ್ನದಲ್ಲಿ ತೊಡಗಿದೆ.
ಅಗತ್ಯ ಸಂಖ್ಯೆಯ ಶಾಸಕರನ್ನು ಕ್ರೋಡೀಕರಿಸಲು ಆರ್ಜೆಡಿಗೆ ಸಾಧ್ಯವಾದರೆ ಅದು ತನ್ನ ಶಾಸಕರನ್ನು ರಾಜ್ಯಪಾಲರ ಎದುರು ಹಾಜರು ಪಡಿಸುವ ಮೂಲಕ ಸರಕಾರ ರಚನೆಗೆ ಹಕ್ಕು ಮಂಡಿಸಬಹುದು.
ಯಾವುದೇ ಸ್ಥಿತಿಯಲ್ಲಿಯೂ ಆರ್ಜೆಡಿಯು ಮೊದಲು ನಿತೀಶ್ ಸರಕಾರಕ್ಕೆ ತನ್ನ ಬೆಂಬಲವನ್ನು ಹಿಂದೆಗೆದುಕೊಳ್ಳಬೇಕಾಗುತ್ತದೆ ಮತ್ತು ಶಾಸಕರ ಬೆಂಬಲವನ್ನು ಕ್ರೋಡೀಕರಿಸುವ ಮೂಲಕ ಸದನದಲ್ಲಿ ತನ್ನ ಬಹುಮತವನ್ನು ಸಾಬೀತು ಪಡಿಸಬೇಕಾಗುತ್ತದೆ.
ಆರ್ಜೆಡಿಯ ಎಂಎಲ್ಎಗಳು ಮತ್ತು ಎಂಎಲ್ಸಿಗಳು ನಿತೀಶ್ ಗೆ ಬೆಂಬಲವನ್ನು ಹಿಂದೆಗೆದುಕೊಳ್ಳುವಂತೆ ಪಕ್ಷದ ನಾಯಕತ್ವದ ಮೇಲೆ ಈಗಾಗಲೇ ಒತ್ತಡವನ್ನು ಹೇರುತ್ತಿದ್ದಾರೆ. ಆದರೆ ತೇಜಸ್ವಿ ಯಾದವ್ ಇದಕ್ಕೆ ವಿರುದ್ಧವಾಗಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ನಿತೀಶ್ ತನ್ನ ನಿಲುವನ್ನು ಮೊದಲು ಸ್ಪಷ್ಟಪಡಿಸಲಿ ಮತ್ತು ಮಹಾ ಘಟಬಂಧನವನ್ನು ತೊರೆಯಲು ಕಾರಣಗಳನ್ನು ತಿಳಿಸಲಿ. ಆ ನಂತರವೇ ಆರ್ಜೆಡಿ ಮುಂದಿನ ಹೆಜ್ಜೆಯನ್ನಿರಿಸಲಿದೆ ಎಂದು ತೇಜಸ್ವಿ ಹೇಳಿದ್ದಾರೆ.
ಸರಕಾರಕ್ಕೆ ಬೆಂಬಲವನ್ನು ಹಿಂದೆಗೆದುಕೊಂಡರೆ ಆರ್ಜೆಡಿ ಉಪಮುಖ್ಯಮಂತ್ರಿಯಂತಹ ಪ್ರಮುಖ ಹುದ್ದೆಗಳ ಕೊಡುಗೆಯನ್ನು ಮಂದಿಟ್ಟು ನಾಲ್ವರು ಎಚ್ಎಎಂ ಮತ್ತು ಓರ್ವ ಪಕ್ಷೇತರ ಶಾಸಕರ ಬೆಂಬಲವನ್ನು ನಿರೀಕ್ಷಿಸಬಹುದು. ಆದಾಗ್ಯೂ ಅದಕ್ಕೆ ಇನ್ನೂ ಮೂವರು ಶಾಸಕರ ಬೆಂಬಲ ಅಗತ್ಯವಾಗುತ್ತದೆ.