“ಸತ್ಯ ಕೇಳಲಾಗದೆ ಓಡಿ ಹೋಗುತ್ತಿದ್ದಾರೆ”: ರಾಜ್ಯಸಭೆಯಲ್ಲಿ ವಿಪಕ್ಷಗಳ ಸಭಾತ್ಯಾಗ ಕುರಿತು ಪ್ರಧಾನಿ ಮೋದಿ ವ್ಯಂಗ್ಯ
ಪ್ರಧಾನಿ ನರೇಂದ್ರ ಮೋದಿ (Photo: PTI)
ಹೊಸದಿಲ್ಲಿ: ಇಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ತಮ್ಮ ಭಾಷಣ ಆರಂಭಿಸುತ್ತಿದ್ದಂತೆಯೇ ವಿಪಕ್ಷಗಳು ಸದನದಿಂದ ಹೊರನಡೆದಿರುವುದನ್ನು ಕಂಡ ಪ್ರಧಾನಿ “ಅವರು (ವಿಪಕ್ಷಗಳು) ಸತ್ಯವನ್ನು ಕೇಳಲಾರದೆ ಓಡಿ ಹೋಗುತ್ತಿದ್ದಾರೆ,” ಎಂದು ಹೇಳಿದ್ದಾರೆ.
ಮೋದಿ ಅವರ ಭಾಷಣದ ವೇಳೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತನಾಡಲು ಅವಕಾಶ ಕಲ್ಪಿಸದೇ ಇದ್ದುದನ್ನು ಪ್ರತಿಭಟಿಸಿ ವಿಪಕ್ಷಗಳು ಸಭಾತ್ಯಾಗ ನಡೆಸಿದ್ದವು.
ವಿಪಕ್ಷಗಳ ಸಭಾತ್ಯಾಗವನ್ನು ಖಂಡಿಸಿದ ರಾಜ್ಯಸಭಾ ಸಭಾಪತಿ ಜಗದೀಪ್ ಧನ್ಕರ್, ಅವರ ಈ ಕ್ರಮ ಸಂವಿಧಾನಕ್ಕೆ ಅಪಮಾನ ಎಂದು ಹೇಳಿದರು.
ಪ್ರಧಾನಿ ತಮ್ಮ ಭಾಷಣದಲ್ಲಿ ಪಶ್ಚಿಮ ಬಂಗಾಳದಲ್ಲಿ ಮಹಿಳೆಯೊಬ್ಬರ ಮೇಲಿನ ದೌರ್ಜನ್ಯ ನಡೆದಿದ್ದನ್ನು ಖಂಡಿಸಿದರು. ಆ ಸಹೋದರಿ ಕಿರುಚುತ್ತಿದ್ದರು, ಆದರೆ ಯಾರೂ ಸಹಾಯಕ್ಕೆ ಬಂದಿಲ್ಲ. ಸಂದೇಶಖಾಲಿಯಲ್ಲಿ ನಡೆದಿದ್ದು ಆಘಾತಕಾರಿ. ಪ್ರಗತಿಪರ ಮಹಿಳಾ ನಾಯಕರು ಕೂಡ ಬಾಯ್ಮುಚ್ಚಿದ್ದಾರೆ,” ಎಂದು ಪ್ರಧಾನಿ ಹೇಳಿದರು.
ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಬಳಿಕ ಸದನವನ್ನು ಅನಿರ್ದಿಷ್ಟ ಮುಂದೂಡಲಾಯಿತು.
“ಪ್ರಧಾನಿ ತಮ್ಮ ಭಾಷಣದಲ್ಲಿ ಕೆಲ ತಪ್ಪಾದ ವಿಷಯಗಳನ್ನು ಹೇಳಿದರು, ಸುಳ್ಳು ಹೇಳುವುದು ಅವರಿಗೆ ಅಭ್ಯಾಸವಾಗಿದೆ. ಅವರು ಸಂವಿಧಾನದ ಬಗ್ಗೆ ಮಾತನಾಡುವಾಗ, ಅವರು ಸಂವಿಧಾನ ರಚಿಸಿಲ್ಲ, ಅವರ ಜನರು ಅದಕ್ಕೆ ವಿರುದ್ಧವಾಗಿದ್ದರು ಎಂದು ಹೇಳಬಯಸಿದ್ದೆ. ಆರೆಸ್ಸೆಸ್ ಜನರು ಸಂವಿಧಾನಕ್ಕೆ ವಿರೋಧ ಹೊಂದಿದ್ದರು ಅವರು ಅಂಬೇಡ್ಕರ್ ಮತ್ತು ನೆಹ್ರೂ ಅವರ ಪ್ರತಿಕೃತಿಗಳನ್ನು ಸುಟ್ಟಿದ್ದರು,”ಎಂದು ಖರ್ಗೆ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.