ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುವವರ ವಿರುದ್ಧ ನಿರ್ದಯ ಕ್ರಮ: ಸಿಇಸಿ ಎಚ್ಚರಿಕೆ
ರಾಜೀವ್ ಕುಮಾರ್ | Photo: PTI
ಹೊಸದಿಲ್ಲಿ: ಈ ಸಲದ ಲೋಕಸಭಾ ಚುನಾವಣೆಯ ಸಂದರ್ಭ ಮಾದರಿ ಚುನಾವಣಾ ನೀತಿ ಸಂಹಿತೆಗಳನ್ನು ಉಲ್ಲಂಂಘಿಸುವವರ ವಿರುದ್ಧ ಈ ಬಾರಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್ ಶನಿವಾರ ಎಚ್ಚರಿಕೆ ನೀಡಿದ್ದಾರೆ. ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸುವ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳ ವಿರುದ್ಧ ಆಯೋಗವು ನಿರ್ದಯದಿಂದ ಕಾರ್ಯಾಚರಿಸಲಿದೆಯೆಂದು ಅವರು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ ಸುದ್ದಿಗಳನ್ನು ಹರಡುವವರ ವಿರುದ್ಧ ನಿಗಾವಹಿಸಲಾಗುವುದು ಎಂದವರು ಹೇಳಿದ್ದಾರೆ.
ಹೊಸದಿಲ್ಲಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘‘ಕಳೆದ ಸಲದ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದವರ ವಿರುದ್ಧ ನೀವು ಹಲವಾರು ನೋಟಿಸ್ಗಳನ್ನು ಜಾರಿಗೊಳಿಸಿದರೂ ಕೂಡಾ ನೀವು ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ. ಎಂಬ ದೂರುಗಳು ಬಂದಿದ್ದವು. ಆದರೆ ಈ ಸಲ ನಾವು ನೋಟಿಸ್ ಗೂ ಮೀರಿದ ಕ್ರಮವನ್ನು ಕೈಗೊಳ್ಳಲಿದ್ದೇವೆ ’’ ಎಂದು ಸಿಇಸಿ ತಿಳಿಸಿದ್ದಾರೆ.
ಚುನಾವಣೆಗೆ ಸಂಬಂಧಿಸಿದ ನಕಲಿ ಸುದ್ದಿಗಳ ವಿರುದ್ಧ ಚುನಾವಣಾ ಆಯೋಗವು ಸತ್ಯತಪಾಸಣೆ ವೆಬ್ ಸೈಟ್ ಅನ್ನು ಆರಂಭಿಸಲಿದೆ ಎಂದವರು ಹೇಳಿದರು.
ರಾಜಕೀಯ ಪಕ್ಷಗಳ ಚುನಾವಣಾ ನಿಧಿಗಳಿಗೆ ಸಂಬಂಧಿಸಿದಂತೆ ಸರಕಾರವು ಸಂಪೂರ್ಣವಾಗಿ ಪಾರದರ್ಶಕತೆಯ ಪರವಾಗಿದೆ. ಆದರೆ ಚುನಾವಣಾ ಬಾಂಡ್ಗಳನ್ನು ನಿಷೇಧಿಸಿ ಸುಪ್ರೀಂಕೋರ್ಟ್ ನ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಅವರು ಪ್ರಜಾಪ್ರಭುತ್ವದಲ್ಲಿ ಯಾವುದನ್ನೂ ಮುಚ್ಚಿಡುವುದಕ್ಕೆ ಆಸ್ಪದವಿಲ್ಲ ಎಂದರು.
ಚುನಾವಣಾ ಪ್ರಚಾರದಲ್ಲಿ ಘನತೆಯನ್ನು ಕಾಯ್ದುಕೊಳ್ಳುವಂತೆ ಹಾಗೂ ವೈಯಕ್ತಿಕ ವಾಗ್ದಾಳಿಗಳಿಂದ ದೂರವಿರುವಂತೆ ಅವರು ಮನವಿ ಮಾಡಿದರು. ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ಕ್ಷಿಪ್ರವಾಗಿ ಶತ್ರುಗಳೋ ಅಥವಾ ಸ್ನೇಹಿತರೋ ಆಗಿ ಬಿಡುತ್ತವೆ ಎಂದರು.
ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವ ಎಲ್ಲಾ ತಾರಾಪ್ರಚಾರಕರಿಗೆ ರಾಜಕೀಯ ಪಕ್ಷಗಳು ಚುನಾವಣಾ ನೀತಿ ಸಂಹಿತೆಯ ಮರ್ಗದರ್ಶಿ ಸೂತ್ರಗಳನ್ನು ಒದಗಿಸಬೇಕೆಂದು ಸೂಚಿಸಿದರು.