ಮಧ್ಯ ಪ್ರದೇಶ: ಸ್ವಾಮಿಯ ಖಾತೆಯಿಂದ 90 ಲಕ್ಷ ರೂ.ಲಪಟಾಯಿಸಿದ ಸಾಧ್ವಿ; ದೂರು
ಸಾಧ್ವಿ ಲಕ್ಷ್ಮಿದಾಸ್ ಅಲಿಯಾಸ್ ರೀನಾ ರಘುವಂಶಿ (Photo: Facebook)
ಭೋಪಾಲ: ಕಳೆದ ವರ್ಷ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ತನ್ನ ಗುರುವಿನ ಬ್ಯಾಂಕ್ ಖಾತೆಯಿಂದ 90 ಲಕ್ಷ ರೂ.ಗಳನ್ನು ಲಪಟಾಯಿಸಿದ ಆರೋಪಿ ಸಾಧ್ವಿಗಾಗಿ ಮಧ್ಯಪ್ರದೇಶದ ಛಿಂದ್ವಾಡಾ ಜಿಲ್ಲೆಯ ಪೋಲಿಸರು ಹುಡುಕಾಡುತ್ತಿದ್ದಾರೆ ಎಂದು newindianexpress.com ವರದಿ ಮಾಡಿದೆ.
ಭೋಪಾಲ ನಿವಾಸಿ ಸಾಧ್ವಿ ಲಕ್ಷ್ಮಿದಾಸ್ ಅಲಿಯಾಸ್ ರೀನಾ ರಘುವಂಶಿ ವಿರುದ್ಧ ಜಿಲ್ಲೆಯ ಚೌರಾಯಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಾಧ್ವಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿಯ ತನ್ನ ಗುರು ಕನಕ ಬಿಹಾರಿ ದಾಸ ಮಹಾರಾಜ್ ಅವರ ಖಾತೆಯಿಂದ 90 ಲಕ್ಷ ರೂ.ಗಳನ್ನು ಮೋಸದಿಂದ ತನ್ನ ಖಾತೆಗೆ ವರ್ಗಾಯಿಸಿಕೊಂಡು ಬಳಿಕ ಡಿಸೆಂಬರ್ 2023 ಮತ್ತು ಜನವರಿ 2024ರ ನಡುವೆ ಅಯೋಧ್ಯೆಯಲ್ಲಿ ಅದನ್ನು ಹಿಂಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಕನಕ ಬಿಹಾರಿ ಅವರು 2023, ಎ.17ರಂದು ರಸ್ತೆ ಅಪಘಾತದಲ್ಲಿ ಸಾಯುವ ಮುನ್ನ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಒಂದು ಕೋಟಿ ರೂ.ಗಳ ದೇಣಿಗೆಯನ್ನು ನೀಡಿದ್ದರೆನ್ನಲಾಗಿದೆ.
ಕನಕ ಬಿಹಾರಿ ಅವರ ನಿಧನದ ಬಳಿಕ ಅವರ ಬ್ಯಾಂಕ್ ಖಾತೆಯೊಂದಿಗೆ ಜೋಡಣೆಗೊಂಡಿದ್ದ ಮೊಬೈಲ್ ಫೋನ್ ಸಂಖ್ಯೆಯನ್ನು ಅನುಯಾಯಿಗಳು ಮರಳಿಸಿದ್ದರು ಮತ್ತು ನಂತರ ಅದನ್ನು ನಿಷ್ಕ್ರಿಯಗೊಳಿಸಲಾಗಿತ್ತು.
ಸಾಧ್ವಿ ತನ್ನ ಸಹಾಯಕರೊಂದಿಗೆ ಸೇರಿಕೊಂಡು ಮೊಬೈಲ್ ಸಂಖ್ಯೆಯನ್ನು ಮತ್ತೆ ಸಕ್ರಿಯಗೊಳಿಸಿದ್ದರು ಹಾಗೂ ಯುಪಿಐ ಮತ್ತು ನೆಟ್ ಬ್ಯಾಂಕಿಂಗ್ ಮೂಲಕ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಮೋಸದಿಂದ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದರು ಎಂದು ಸ್ವಾಮಿಯ ಅನುಯಾಯಿ ಶ್ಯಾಮದಾಸ ಮಹಾರಾಜ್ ದೂರಿನಲ್ಲಿ ಆರೋಪಿಸಿದ್ದಾರೆ. ಈ ವಂಚನೆ ಈ ತಿಂಗಳ ಆರಂಭದಲ್ಲಿ ಬೆಳಕಿಗೆ ಬಂದಿತ್ತು.
ಛಿಂದ್ವಾಡದಲ್ಲಿ ರಘುವಂಶಿ ಸಮುದಾಯದ ಸ್ವಾಮಿಯಾಗಿದ್ದ ಕನಕ ಬಿಹಾರಿ ತನ್ನ ನಾಮಿನಿಯನ್ನಾಗಿ ಯಾರನ್ನೂ ಘೋಷಿಸಿರಲಿಲ್ಲ. ಇದರ ಲಾಭ ಪಡೆದ ಸಾಧ್ವಿ ತನ್ನನ್ನೇ ನಾಮಿನಿ ಎಂದು ಘೋಷಿಸಿಕೊಂಡು ಖಾತೆಯಲ್ಲಿದ್ದ ಹಣವನ್ನು ತೆಗೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.