ಸೈಫ್ ಅಲಿ ಖಾನ್ ಮೆಡಿಕ್ಲೈಮ್ ಪ್ರಶ್ನಿಸಿ IRDAI ಗೆ ಪತ್ರ ಬರೆದ ವೈದ್ಯರ ಸಂಘ

ಸೈಫ್ ಅಲಿ ಖಾನ್ | PC : PTI
ಮುಂಬೈ: ನಟ ಸೈಫ್ ಅಲಿ ಖಾನ್ ಅವರ ವೈದ್ಯಕೀಯ ವಿಮೆಯನ್ನು ವಿಮಾ ಸಂಸ್ಥೆ ನಿವಾ ಬೂಪಾ ಕ್ಷಿಪ್ರವಾಗಿ ಅನುಮೋದಿಸಿದ ನಂತರ, ತಾರಾನಟರು ಪಡೆದಿರುವ ಆದ್ಯತಾ ಚಿಕಿತ್ಸೆಯನ್ನು ಪ್ರಶ್ನಿಸಿ ವೈದ್ಯಕೀಯ ವೃತ್ತಿಪರರ ಸಂಘಟನೆಯೊಂದು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆದಿದೆ.
ಜನವರಿ 16ರಂದು ಸೈಫ್ ಅಲಿ ಖಾನ್ ನಿವಾಸದಲ್ಲಿ ನಡೆದಿದ್ದ ದರೋಡೆ ಪ್ರಯತ್ನದ ಸಂದರ್ಭದಲ್ಲಿ ಅವರಿಗಾಗಿದ್ದ ಇರಿತದ ನಂತರ ಈ ಬೆಳವಣಿಗೆ ನಡೆದಿದೆ. ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಿದ ಬೆನ್ನಿಗೇ, ನಟ ಸೈಫ್ ಅಲಿ ಖಾನ್ ತಮ್ಮ ವೈದ್ಯಕೀಯ ವಿಮೆಯಾಗಿ 36 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದು, ಈ ಪೈಕಿ ವಿಮಾ ಸಂಸ್ಥೆಯು 25 ಲಕ್ಷ ರೂಪಾಯಿ ವಿಮೆಗೆ ಅನುಮೋದನೆ ನೀಡಿರುವ ಮೆಡಿಕ್ಲೈಮ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ಇದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಮುಂಬೈ ಮೂಲದ ಅಸೋಸಿಯೇಶನ್ ಆಫ್ ಮೆಡಿಕಲ್ ಕನ್ಸಲ್ಟೆಂಟ್ಸ್, “ಸಾಮಾನ್ಯ ಪಾಲಿಸಿದಾರರಿಗೆ ದೊರೆಯುವ ಪ್ರಯೋಜನಗಳಿಗೆ ಹೋಲಿಸಿದರೆ, ಸೈಫ್ ಅಲಿ ಖಾನ್ ಅವರ ನಗದು ರಹಿತ ಚಿಕಿತ್ಸೆಗೆ ಅವರ ವಿಮೆಯಡಿ ಮಂಜೂರು ಮಾಡಿರುವ 25 ಲಕ್ಷ ರೂಪಾಯಿ ಮೊತ್ತವು ಆದ್ಯತೆಯ ಚಿಕಿತ್ಸೆಯಂತೆ ಕಂಡು ಬರುತ್ತಿದೆ” ಎಂದು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆದಿದೆ.
ಸಮಸ್ಯಾತ್ಮಕ ಪ್ರವೃತ್ತಿ ತಲೆದೋರಿದ್ದು, ತಾರಾನಟರು ಹಾಗೂ ಇನ್ನಿತರ ಪ್ರಭಾವಿ ವ್ಯಕ್ತಿಗಳು ಅನುಕೂಲಕರ ನಿಯಮಗಳು ಹಾಗೂ ಅಧಿಕ ನಗದು ರಹಿತ ಚಿಕಿತ್ಸೆ ಮಿತಿಯನ್ನು ಸ್ವೀಕರಿಸುತ್ತಿದ್ದರೆ, ಸಾಮಾನ್ಯ ಜನರು ಅಸಮರ್ಪಕ ವಿಮಾ ಮೊತ್ತ ಹಾಗೂ ಕಡಿಮೆ ಮರುಪಾವತಿ ದರವನ್ನು ಪಡೆಯಲು ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದೂ ಅದು ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.
ಈ ಪ್ರವೃತ್ತಿಯನ್ನು ಅನ್ಯಾಯಯುತ ತಾರತಮ್ಯ ಎಂದು ಬಣ್ಣಿಸಿರುವ ಅಸೋಸಿಯೇಶನ್ ಆಫ್ ಮೆಡಿಕಲ್ ಕನ್ಸಲ್ಟೆಂಟ್ಸ್, “ವಿಮೆಯು ಸಾಮಾಜಿಕ ಸ್ಥಿತಿಗತಿಯ ಹೊರತಾಗಿ ಎಲ್ಲರ ಹಿತವನ್ನೂ ರಕ್ಷಿಸಬೇಕು. ತಾರಾನಟರ ಸ್ಥಾನಮಾನವನ್ನು ಆಧರಿಸಿ ನೀಡಲಾಗುವ ಆದ್ಯತೆಯ ಚಿಕಿತ್ಸೆಯು ಎರಡು ಹಂತದ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ. ಇದು ಸಾಮಾನ್ಯ ಪಾಲಿಸಿದಾರರ ವಿರುದ್ಧದ ತಾರತಮ್ಯವಾಗಿದೆ. ವಿಮಾ ಮರುಪಾವತಿ ಹಾಗೂ ನಗದು ರಹಿತ ಚಿಕಿತ್ಸೆಯ ಮಿತಿಯನ್ನು ನಿರ್ಧರಿಸಲು ಭಾರಿ ಪಾರದರ್ಶಕತೆಯ ಅಗತ್ಯವಿದೆ” ಎಂದೂ ಅದು ಕರೆ ನೀಡಿದೆ.