ಸೈಫ್ ಅಲಿಖಾನ್ ಚೇತರಿಕೆ: ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ನಿರೀಕ್ಷೆ

ಸೈಫ್ ಅಲಿ ಖಾನ್ x.com/NBCNews
ಮುಂಬೈ: ದಾಳಿಕೋರನಿಂದ ಗುರುವಾರ ನಸುಕಿನಲ್ಲಿ ಹಲವು ಬಾರಿ ಇರಿತಕ್ಕೆ ಒಳಗಾಗಿರುವ ಬಾಲಿವುಡ್ ನಟ ಸೈಫ್ ಅಲಿ ಖಾನ್ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದು, ಸೋಮವಾರದ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ವೈದ್ಯರು ಪ್ರಕಟಿಸಿದ್ದಾರೆ.
ಬೆನ್ನುಹುರಿಯ ಭಾಗದಲ್ಲಿ ಸಿಕ್ಕಿಹಾಕಿಕೊಂಡಿದ್ದ ಚೂರಿ ತುಂಡನ್ನು ಹೊರತೆಗೆಯುವ ಸಲುವಾಗಿ ತುರ್ತು ಶಸ್ತ್ರಚಿಕಿತ್ಸಗೆ ಒಳಗಾಗಿದ್ದ 54 ವರ್ಷದ ನಟ, ಆಸ್ಪತ್ರೆಯ ತೀವ್ರ ನಿಗಾ ಘಟಕದಿಂದ ವಿಶೇಷ ಕೊಠಡಿಗೆ ಶುಕ್ರವಾರ ಸ್ಥಳಾಂತರಗೊಳ್ಳುವಷ್ಟರ ಮಟ್ಟಿಗೆ ಚೇತರಿಸಿಕೊಂಡಿದ್ದಾರೆ.
"ಶುಕ್ರವಾರ ಮಧ್ಯಾಹ್ನದ ವೇಳೆಗೆ ಅವರನ್ನು ವಿಶೇಷ ಕೊಠಡಿಗೆ ಸ್ಥಳಾಂತರಿಸಲಾಗಿದೆ" ಎಂದು ಲೀಲಾವತಿ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ನೀರಜ್ ಉತ್ತಮಣಿ ಹೇಳಿದ್ದಾರೆ. "ಅವರು ಅಪಾಯದಿಂದ ಪಾರಾಗಿದ್ದಾರೆ. ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಮುಂದಿನ ಎರಡು ಮೂರು ದಿನಗಳಲ್ಲಿ ಅವರನ್ನು ಬಿಡುಗಡೆ ಮಾಡುವ ಬಗ್ಗೆ ಯೋಚಿಸುತ್ತಿದ್ದೇವೆ" ಎಂದು ವಿವರಿಸಿದ್ದಾರೆ.
ಬೆನ್ನುಹುರಿ ಭಾಗದಿಂದ ಹೊರತೆಗೆದ ಚೂರಿಯ ತುಂಡು x.com/KumarlLamani | ಸೈಫ್ ಅಲಿ ಖಾನ್ x.com/NBCNews
ಬೆನ್ನುಹುರಿ ಭಾಗದಿಂದ ಚೂರಿ ತುಂಡನ್ನು ಹೊರತೆಗೆದು ಬೆನ್ನುಹುರಿ ದ್ರವದ ಸೋರಿಕೆಯನ್ನು ತಡೆಯಲು ಸುಮಾರು ಐದೂವರೆ ಗಂಟೆಗಳ ತುರ್ತು ಶಸ್ತ್ರಚಿಕಿತ್ಸೆಯನ್ನು ವೈದ್ಯರು ಯಶಸ್ವಿಯಾಗಿ ಮಾಡಿದ್ದಾರೆ. ಬೆಳಿಗ್ಗೆ 5 ಗಂಟೆಗೆ ಆರಂಭವಾದ ಶಸ್ತ್ರಚಿಕಿತ್ಸೆ 10.30ರ ವೇಳೆಗೆ ಮುಗಿದಿದೆ ಎಂದು ಅವರು ಹೇಳಿದ್ದಾರೆ. ಖಾನ್ ಮೇಲೆ ಮುಂಜಾನೆ 2 ಗಂಟೆ ವೇಳೆಗೆ ದಾಳಿ ನಡದಿತ್ತು.
ಬೆನ್ನಿನ ಒಳಗೆ ಚೂರಿ ತುಂಡಾಗುವಷ್ಟು ಬಲವಾಗಿ ಇರಿಯಲಾಗಿದೆ ಎಂದು ಲೀಲಾವತಿ ಆಸ್ಪತ್ರೆಯ ಮೂಲಗಳು ಹೇಳಿವೆ. ಎರಡು ಇಂಚು ಉದ್ದದ ಚೂರಿಯ ತುಂಡನ್ನು ಪೊಲೀಸರಿಗೆ ಹಸ್ತಾಂತರಿಸಿದ್ದು, ಇದನ್ನು ಪುರಾವೆಯಾಗಿ ಸಲ್ಲಿಸಲಾಗುತ್ತದೆ. ಖಾನ್ ಅವರಿಗೆ ಆರು ಇರಿತದ ಗಾಯಗಳಾಗಿದ್ದವು. ಈ ಪೈಕಿ ಎರಡು ಅತ್ಯಂತ ಆಳವಾದ ಗಾಯಗಳು.