ಸೈಫ್ ಅಲಿ ಖಾನ್ ಗೆ ಚೂರಿ ಇರಿತ ಪ್ರಕರಣ: ಥಾಣೆಯಲ್ಲಿ ಆರೋಪಿಯ ಬಂಧನ

PC: x.com/ndtv
ಹೊಸದಿಲ್ಲಿ: ಬಾಲಿವುಡ್ ತಾರೆ ಸೈಫ್ ಅಲಿ ಖಾನ್ ಅವರ ಮೇಲೆ ಚೂರಿ ದಾಳಿ ನಡೆಸಿದ ಆರೋಪಿಯನ್ನು ಮುಂಬೈ ಪೊಲೀಸರು ಭಾನುವಾರ ಥಾಣೆಯಲ್ಲಿ ಬಂಧಿಸಿದ್ದಾರೆ. ದಾಳಿಕೋರನನ್ನು ಘಟನೆ ನಡೆದ ಮೂರು ದಿನಗಳ ಬಳಿಕ ಮುಂಬೈ ಪೊಲೀಸರು ಥಾಣೆಯಲ್ಲಿ ಬಂಧಿಸಿದ್ದಾಗಿ ಮುಂಬೈ ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ.
ಮೊದಲು ಆರೋಪಿ ತನ್ನ ಹೆಸರು ಬಿಜೋಯ್ ದಾಸ್ ಎಂದು ಹೇಳಿಕೊಂಡಿದ್ದ. ಬಳಿಕ ಮೊಹ್ಮದ್ ಸಜ್ಜಾದ್ ಎಂದು ಹೇಳಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ಆತನ ಗುರುತನ್ನು ದೃಢಪಡಿಸುವ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ದಟ್ಟ ಪೊದೆಗಳ ಮಧ್ಯದಲ್ಲಿ ಒಣಹುಲ್ಲಿನ ಅಡಿಯಲ್ಲಿ ನಿದ್ದೆ ಮಾಡುತ್ತಿದ್ದ ಸ್ಥಿತಿಯಲ್ಲಿ ಆರೋಪಿ ಪತ್ತೆಯಾಗಿದ್ದಾನೆ ಎಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಮುಂಬೈ ಪೊಲೀಸ್ ಇಲಾಖೆಯ ಡಿಸಿಪಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. "ಆರೋಪಿ ಈ ಮೊದಲು ಇಲ್ಲಿ ಕೆಲಸ ಮಾಡಿದ್ದ. ಆದ್ದರಿಂದ ಸ್ಥಳದ ಬಗ್ಗೆ ಈತನಿಗೆ ಅರಿವು ಇದ್ದು, ತಪ್ಪಿಸಿಕೊಳ್ಳುವ ಜಾಗವನ್ನು ಕಂಡುಕೊಂಡಿದ್ದ" ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಹೆಚ್ಚಿನ ತನಿಖೆಗಾಗಿ ಆತನನ್ನು ಮುಂಬೈಗೆ ಕರೆ ತರಲಾಗಿದೆ ಎಂದು ಮೂಲಗಳು ಹೇಳಿವೆ.
ಖಾನ್ ಅವರನ್ನು ಇರಿದ ಬಳಿಕ ಆರೋಪಿ ಮೆಟ್ಟಿಲುಗಳ ಮೂಲಕ ಇಳಿದು ತಪ್ಪಿಸಿಕೊಂಡು ಹೋಗುತ್ತಿರುವ ಸಿಸಿಟಿವಿ ದೃಶ್ಯಾವಳಿಯನ್ನು ಬಿಡುಗಡೆ ಮಾಡಲಾಗಿತ್ತು. 12ನೇ ಮಹಡಿಯಲ್ಲಿದ್ದ ಖಾನ್ ನಿವಾಸದಲ್ಲಿ ಆರೋಪಿ ಈ ಕೃತ್ಯ ಎಸಗಿದ್ದು, ಆರನೇ ಮಹಡಿಯ ಮೆಟ್ಟಿಲಿನಲ್ಲಿ ಓಡಿ ಹೋಗುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬಂದಿತ್ತು.
ಇದಕ್ಕೂ ಮುನ್ನ ಶನಿವಾರ ರೈಲ್ವೆ ಸುರಕ್ಷಾ ಪಡೆ (ಆರ್ಪಿಎಫ್) ಪೊಲೀಸರು ಛತ್ತೀಸ್ಗಢದ ದುರ್ಗ್ ರೈಲು ನಿಲ್ದಾಣದಲ್ಲಿ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಿದ್ದರು. ಆಕಾಶ್ ಕೈಲಾಶ್ ಕನೋಜಿಯಾ (31) ಎಂಬಾತನನ್ನು ಮುಂಬೈ ಲೋಕಮಾನ್ಯ ತಿಲಕ್ ನಿಲ್ದಾಣದಿಂದ ಕೊಲ್ಕತ್ತಾ ಶಾಲಿಮರ್ ಗೆ ಹೋಗುವ ಮಾರ್ಗಮಧ್ಯೆ ಬಂಧಿಸಲಾಗಿತ್ತು.