ಸತೀಶ್ ಆಚಾರ್ಯ, ಮಂಜುಲ್ ಕಾರ್ಟೂನ್ ಗಳು ಭಾರತದ ಕಾನೂನನ್ನು ಉಲ್ಲಂಘಿಸುತ್ತವೆ ಎಂದು ನೋಟಿಸ್!
ಮಂಜುಲ್(scroll.in) , ಸತೀಶ್ ಆಚಾರ್ಯ(Satish Acharya \ instagram.com)
ಹೊಸದಿಲ್ಲಿ : ಕಳೆದ ವಾರ ಭಾರತೀಯ ವ್ಯಂಗ್ಯಚಿತ್ರಕಾರರಾದ ಸತೀಶ್ ಆಚಾರ್ಯ ಮತ್ತು ಮಂಜುಲ್ ಅವರಿಗೆ ತಮ್ಮ ವ್ಯಂಗ್ಯ ಚಿತ್ರಗಳು ಭಾರತದ ಮಾಹಿತಿ ತಂತ್ರಜ್ಞಾನದ ಕಾನೂನುಗಳನ್ನು ಉಲ್ಲಂಘಿಸುತ್ತವೆ ಎಂದು ತಿಳಿಸಲಾಗಿದೆ.
ವಾಷಿಂಗ್ಟನ್ ಪೋಸ್ಟ್ ನ ಮಾಲಕ ಜೆಫ್ ಬೆಜೋಸ್ ಮತ್ತು ಬಿಲಿಯನರ್ ಮಾರ್ಕ್ ಝುಕರ್ಬರ್ಗ್ ಟ್ರಂಪ್ ಗೆ ತಲೆಬಾಗುವ ತನ್ನ ವ್ಯಂಗ್ಯಚಿತ್ರವನ್ನು ವಾಷಿಂಗ್ಟನ್ ಪೋಸ್ಟ್ ತಿರಸ್ಕರಿಸಿದ ಬೆನ್ನಲ್ಲೇ ಪುಲಿಟ್ಜರ್ ವಿಜೇತ ವ್ಯಂಗ್ಯಚಿತ್ರಕಾರ್ತಿ ಆನ್ ಟೆಲ್ನೇಸ್(Ann Telnaes) ರಾಜೀನಾಮೆ ಘೋಷಿಸಿದ್ದರು. ಇದರ ಬೆನ್ನಲ್ಲೇ ಭಾರತದಲ್ಲಿ ಈ ಬೆಳವಣಿಗೆ ಬೆಳಕಿಗೆ ಬಂದಿದೆ ಎಂದು Telegraph India ವರದಿ ಮಾಡಿದೆ.
ಎಲಾನ್ ಮಸ್ಕ್ ಒಡೆತನದ ಸಾಮಾಜಿಕ ಮಾಧ್ಯಮ ವೇದಿಕೆ ʼಎಕ್ಸ್ʼ ಭಾರತೀಯ ವ್ಯಂಗ್ಯಚಿತ್ರಕಾರರಾದ ಸತೀಶ್ ಆಚಾರ್ಯ ಮತ್ತು ಮಂಜುಲ್ ಅವರಿಗೆ ತಮ್ಮ ವ್ಯಂಗ್ಯ ಚಿತ್ರಗಳಿಗೆ ಮುಂಬೈನ ಪೊಲೀಸರಿಂದ ಆಕ್ಷೇಪಣೆ ಬಂದಿದೆ ಎಂದು ತಿಳಿಸಿದೆ.
ದಿವಂಗತ ಬಾಳ್ ಠಾಕ್ರೆ ಮುಂಬೈನಲ್ಲಿ ಪ್ರಾಬಲ್ಯವನ್ನು ಮೆರೆದವರು. ಬಾಳ್ ಠಾಕ್ರೆ ಓರ್ವ ಹೆಸರಾಂತ ವ್ಯಂಗ್ಯಚಿತ್ರಕಾರ ಮತ್ತು ರಾಜಕಾರಣಿಯಾಗಿದ್ದರು. ಆದರೆ ಅದೇ ಬಾಳ್ ಠಾಕ್ರೆಯ ಮುಂಬೈನಲ್ಲಿ ಅಸೀಮ್ ತ್ರಿವೇದಿ ಅವರ ವ್ಯಂಗ್ಯ ಚಿತ್ರದ ವಿರುದ್ಧ ದೇಶದ್ರೋಹದ ಆರೋಪ ಹೊರಿಸಲಾಗಿತ್ತು. ಈ ಬಗ್ಗೆ ಬಾಂಬೆ ಹೈಕೋರ್ಟ್ ಮಹಾರಾಷ್ಟ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಅಸೀಮ್ ತ್ರಿವೇದಿ ಭಾರತದ ರಾಷ್ಟ್ರೀಯ ಲಾಂಛನವಾದ ಅಶೋಕ ಸ್ತಂಭದಲ್ಲಿ ಸಿಂಹಗಳ ಬದಲಿಗೆ ತೋಳಗಳನ್ನು ಚಿತ್ರಿಸಿದ್ದರು. ಅಂತಿಮವಾಗಿ, ತ್ರಿವೇದಿ ವಿರುದ್ಧದ ಎಲ್ಲಾ ಆರೋಪಗಳನ್ನು ಕೈಬಿಡಲಾಗಿತ್ತು.
ವ್ಯಂಗ್ಯ ಚಿತ್ರಕಾರ ಸತೀಶ್ ಆಚಾರ್ಯ ತನಗೆ ಎಕ್ಸ್ ನಿಂದ ಬಂದ ನೋಟಿಸ್ ಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರು ಸಾಮಾಜಿಕ ಮಾಧ್ಯಮಗಳಲ್ಲಿ ನೋಟಿಸ್ ನ ಸ್ಕ್ರೀನ್ ಶಾಟ್ ಗಳನ್ನು ಕೂಡ ಪೋಸ್ಟ್ ಮಾಡಿದ್ದಾರೆ. ʼನಿಮ್ಮ ಎಕ್ಸ್ ಖಾತೆ @safishacharya ಭಾರತದ ಮಾಹಿತಿ ತಂತ್ರಜ್ಞಾನ ಕಾಯ್ದೆಯನ್ನು ಉಲ್ಲಂಘಿಸುತ್ತದೆ ಎಂದು ಮುಂಬೈ ಪೊಲೀಸರು ನಮಗೆ ಮಾಹಿತಿ ನೀಡಿದ್ದಾರೆ. ಖಾತೆಯಿಂದ ವಿಷಯವನ್ನು ತೆಗೆದುಹಾಕಲು ಕಾನೂನು ಜಾರಿ ಅಥವಾ ಸರ್ಕಾರಿ ಸಂಸ್ಥೆಗಳಿಂದ ಸೂಚನೆ ಸ್ವೀಕರಿಸಿದರೆ ನಮ್ಮ ಬಳಕೆದಾರರಿಗೆ ತಿಳಿಸುವುದು ನಮ್ಮ ನೀತಿಯಾಗಿದೆ. ಈ ರೀತಿಯ ಸೂಚನೆಯನ್ನು ಸ್ವೀಕರಿಸುವುದರಿಂದ ನಿಮಗೆ ಗೊಂದಲದ ಅನುಭವವಾಗಿರಬಹುದು. ನಿಮ್ಮ ಹಿತಾಶಕ್ತಿಗಳನ್ನು ಕಾಪಾಡಲು ನೀವು ಪರ್ಯಾಯ ಹಾದಿಯನ್ನು ಕಂಡುಕೊಳ್ಳಬಹುದು. ನ್ಯಾಯಾಲಯದಲ್ಲಿ ಸೂಚನೆಯನ್ನು ಪ್ರಶ್ನಿಸಬಹುದು, ನಾಗರಿಕ ಸಮಾಜ ಸಂಸ್ಥೆಗಳನ್ನು ಸಂಪರ್ಕಿಸಬಹುದು. ವಿಷಯವನ್ನು ಸ್ವಯಂಪ್ರೇರಣೆಯಿಂದ ಅಳಿಸಬಹುದು ಅಥವಾ ಬೇರೆ ಯಾವುದೇ ನಿರ್ಣಯವನ್ನು ತೆಗೆದುಕೊಳ್ಳಬಹುದಾಗಿದೆ ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.
ಮಂಜುಲ್ ಅವರಿಗೆ ಕೂಡ ಇದೇ ರೀತಿಯ ನೋಟಿಸ್ ನೀಡಲಾಗಿದೆ. ಸತೀಶ್ ಆಚಾರ್ಯ ಅಥವಾ ಮಂಜುಲ್ ವಿರುದ್ಧ ಈ ಬಗ್ಗೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ. ಅವರ ಪೋಸ್ಟ್ ಹೇಗೆ ಕಾನೂನುಗಳನ್ನು ಉಲ್ಲಂಘಿಸಿದೆ ಎಂಬುದನ್ನು ತಿಳಿಯಲು ಎಕ್ಸ್ ಅನ್ನು ಕೂಡ ಅವರು ಸಂಪರ್ಕಿಸಿಲ್ಲ. ಆದರೆ, ಇಬ್ಬರೂ ನಾವು ಈ ಬಗ್ಗೆ ಭಯಪಡುವುದಿಲ್ಲ ಎಂದು ಹೇಳಿರುವುದಾಗಿ Telegraph India ವರದಿ ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ, ಭಾರತದ ಸಂವಿಧಾನವು ವ್ಯಂಗ್ಯಚಿತ್ರಗಳ ಮೂಲಕ ಪ್ರಚಲಿತ ವಿದ್ಯಮಾನಗಳ ಬಗ್ಗೆ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕನ್ನು ನನಗೆ ನೀಡಿದೆ. ಅಧಿಕಾರದಲ್ಲಿರುವ ಜನರು ಕಾರ್ಟೂನ್ ಗಳನ್ನು ಒಪ್ಪಬಹುದು ಅಥವಾ ಒಪ್ಪದಿರಬಹುದು. ಆದರೆ, ಅವರು ವ್ಯಂಗ್ಯಚಿತ್ರಕಾರರ ಪ್ರಶ್ನಿಸುವ, ವಿಮರ್ಶೆಯ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಮತ್ತು ಕಾರ್ಟೂನ್ ಗಳ ಮೂಲಕ ಅಭಿಪ್ರಾಯ ವ್ಯಕ್ತಪಡಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಪತ್ರಕರ್ತರು, ವ್ಯಂಗ್ಯಚಿತ್ರಕಾರರು ಆಕ್ಷೇಪಣೆಗಳನ್ನು ಎದುರಿಸುವುದು ಸರ್ವೆ ಸಾಮಾನ್ಯವಾಗಿದೆ. ಸಂಪಾದಕೀಯ ವ್ಯಂಗ್ಯಚಿತ್ರಗಳ ಮೂಲಕ ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸುವ ವ್ಯಂಗ್ಯಚಿತ್ರಕಾರರ ಶ್ರೀಮಂತ ಪರಂಪರೆಯನ್ನು ಭಾರತ ಹೊಂದಿದೆ. ಸರ್ಕಾರ, ಸ್ಥಾಪನೆ, ನೀತಿಗಳನ್ನು, ನಾಯಕರನ್ನು ಪ್ರಶ್ನಿಸುವುದು ವ್ಯಂಗ್ಯಚಿತ್ರಕಾರನ ಕೆಲಸ ಮತ್ತು ಕರ್ತವ್ಯ. ವೃತ್ತಿಪರ ವ್ಯಂಗ್ಯಚಿತ್ರಕಾರನಾಗಿ ಕಳೆದ ಎರಡು ದಶಕಗಳಿಂದ ನಾನು ಅದೇ ಕೆಲಸವನ್ನು ಮಾಡುತ್ತಿದ್ದೇನೆ. ಅಧಿಕಾರದಲ್ಲಿರುವ ಪಕ್ಷ, ಅಧಿಕಾರದಲ್ಲಿರುವ ಜನರು ಬದಲಾಗಬಹುದು. ಆದರೆ ಸರ್ಕಾರವನ್ನು ಪ್ರಶ್ನಿಸುವ ವ್ಯಂಗ್ಯಚಿತ್ರಕಾರನ ನಿಲುವು ಬದಲಾಗುವುದಿಲ್ಲ ಎಂದು ಸತೀಶ್ ಆಚಾರ್ಯ ಹೇಳಿದ್ದಾರೆ.
ವ್ಯಂಗ್ಯಚಿತ್ರಕಾರ ಮಂಜುಲ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ನಾವು ಭಯಪಡುವುದಿಲ್ಲ. ಈ ಸೂಚನೆಯು ಪಾರದರ್ಶಕತೆ ಮತ್ತು ಪ್ರಕ್ರಿಯೆಯ ಬಗ್ಗೆ ಕಳವಳವನ್ನು ಉಂಟುಮಾಡುತ್ತದೆ. ಇದು ನನಗೆ ಎರಡನೇ ಬಾರಿಗೆ ಸಿಕ್ಕಿರುವ ನೋಟಿಸ್ ಆಗಿದೆ. ಒಂದೆರಡು ವರ್ಷಗಳ ಹಿಂದೆ ಮೊದಲ ನೋಟಿಸ್ ನಮಗೆ ಸಿಕ್ಕಿತ್ತು. ಅದು ಅಸ್ಪಷ್ಟವಾಗಿತ್ತು. ಈ ಬಾರಿ ಮುಂಬೈ ಪೊಲೀಸರ ಹೆಸರನ್ನಾದರೂ ಅವರು ಉಲ್ಲೇಖಿಸಿದ್ದಾರೆ. ಆದರೆ ಕಾರ್ಟೂನ್ ಹೇಗೆ ಕಾನೂನು ಉಲ್ಲಂಘಿಸುತ್ತದೆ ಎಂಬುವುದನ್ನು ತಿಳಿಯಲು ನಾನು ವಿಫಲನಾಗಿದ್ದೇನೆ ಎಂದು ಹೇಳಿದ್ದಾರೆ.
ಇಂತಹ ಸೂಚನೆಗಳು ಮುಕ್ತ ವಾಕ್ ಸ್ವಾತಂತ್ರ್ಯ ಮತ್ತು ಪತ್ರಿಕೋದ್ಯಮದ ಮೇಲೆ ಪರಿಣಾಮ ಬೀರುತ್ತದೆ. ಅನೇಕ ವ್ಯಂಗ್ಯ ಚಿತ್ರ ರಚನೆಕಾರರು ಮತ್ತು ಪತ್ರಕರ್ತರು ಸೂಕ್ಷ್ಮ ವಿಷಯಗಳಿಂದ ದೂರ ಸರಿಯುತ್ತಾರೆ. ಸೂಕ್ಷ್ಮ ವಿಷಯಗಳಿಂದಾಗುವ ಪರಿಣಾಮಗಳ ಬಗ್ಗೆ ಭಯಪಡುತ್ತಾರೆ ಎಂದು ಮಂಜುಲ್ ಹೇಳಿದ್ದಾರೆ.
ಮಂಜುಲ್ ಪ್ಯಾಟ್ರಿಯೋನ್ ನಲ್ಲಿ ಈ ಕುರಿತು ಬರೆದುಕೊಂಡಿದ್ದು, ನೋಟಿಸ್ ಬಗ್ಗೆ ಸ್ಪಷ್ಟೀಕರಣಕ್ಕಾಗಿ ಎಕ್ಸ್ ನ್ನು ಅನ್ನು ಸಂಪರ್ಕಿಸಿದೆ. ಆದರೆ, ಇನ್ನೂ ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ಸ್ವೀಕರಿಸಿಲ್ಲ. ಕಾರ್ಟೂನ್ ಅನ್ನು ತೆಗೆದುಹಾಕಲಾಗಿಲ್ಲ. ಮುಕ್ತ ಅಭಿವ್ಯಕ್ತಿಯನ್ನು ತಡೆಯುವ ಸರಕಾರದ ಒತ್ತಡವು ಕಳವಳಕಾರಿಯಾಗಿದೆ. ಮುಕ್ತ ಪತ್ರಿಕಾ ವ್ಯವಸ್ಥೆ ಪ್ರಜಾಪ್ರಭುತ್ವಕ್ಕೆ ಮೂಲಭೂತವಾಗಿದೆ. ನೋಟಿಸ್ ಗಳು ಅಥವಾ ಸೆನ್ಸಾರ್ ಶಿಪ್ ಮೂಲಕ ಟೀಕೆಗಳನ್ನು ನಿಶ್ಯಬ್ದಗೊಳಿಸುವುದು ಪ್ರತಿಗಾಮಿ ವಿಧಾನವನ್ನು ಪ್ರತಿಬಿಂಬಿಸುತ್ತದೆ ಮತ್ತು ನಾವು ಬಯಸುತ್ತಿರುವ ಅಭಿವೃದ್ಧಿ ಹೊಂದಿದ ರಾಷ್ಟ್ರದ ದೃಷ್ಟಿಕೋನದಿಂದ ದೂರತಳ್ಳುತ್ತದೆ ಎಂದು ಮಂಜುಲ್ ಹೇಳಿದ್ದಾರೆ.
ಮಂಜುಲ್ ಮತ್ತು ಆಚಾರ್ಯ ಇಬ್ಬರೂ ಅಮೆರಿಕದ ವ್ಯಂಗ್ಯ ಚಿತ್ರಕಾರ್ತಿ ಆನ್ ಟೆಲ್ನೇಸ್ ಅವರನ್ನು ಪ್ರಶಂಸಿಸಿದರು. ಅವರು ಏನು ಮಾಡಿದರು? ತನ್ನ ಕೆಲಸದ ಮೂಲಕ ತನ್ನದೇ ಪತ್ರಿಕೆಯ ಮಾಲೀಕರನ್ನು ಟೀಕಿಸಿದ್ದರು. ಇದು ಧೈರ್ಯದ ಕಾರ್ಯವಾಗಿದೆ. ಇದನ್ನು ಭಾರತದಲ್ಲಿ ಊಹಿಸಲು ಕೂಡ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.