ರಾಜಕೀಯ ಚರ್ಚೆಗೆ ಗ್ರಾಸವಾದ ‘ಸತೀಶ್ ಜಾರಕಿಹೊಳಿ ಭವಿಷ್ಯದ ಮುಖ್ಯಮಂತ್ರಿ’ ಬ್ಯಾನರ್
Photo credit: etvbharat.com
ಬೆಳಗಾವಿ: ಮುಡಾ ನಿವೇಶನ ಹಂಚಿಕೆ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ‘ಮುಖ್ಯಮಂತ್ರಿ ಬದಲಾವಣೆ’ಯ ಚರ್ಚೆ ಮಧ್ಯೆಯೇ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ‘ಭವಿಷ್ಯದ ಮುಖ್ಯಮಂತ್ರಿ’ ಎಂಬ ಬ್ಯಾನರ್ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ರವಿವಾರ ಬೆಳಗಾವಿ ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ‘ಕನ್ನಡ ರಾಜ್ಯೋತ್ಸವ, ದೀಪಾವಳಿ ಹಾಗೂ ಮಹರ್ಷಿ ವಾಲ್ಮೀಕಿ ಜಯಂತಿ’ ಹಿನ್ನೆಲೆಯಲ್ಲಿ ಬ್ಯಾನರ್ವೊಂದನ್ನು ಅಳವಡಿಸಿದೆ. ಸತೀಶ್ ಜಾರಕಿಹೊಳಿ ಭಾವಚಿತ್ರದ ಕೆಳಗೆ ಜಿಲ್ಲಾ ಉಸ್ತುವಾರಿ ಬೆಳಗಾವಿ, ‘ಭವಿಷ್ಯದ ಮುಖ್ಯಮಂತ್ರಿ’ ಎಂದು ಉಲ್ಲೇಖಿಸಿರುವುದು ಚರ್ಚೆಗೆ ಕಾರಣವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿ ಭೇಟಿ ನೀಡಿದ ಸಂದರ್ಭದಲ್ಲೇ ‘ಭವಿಷ್ಯದ ಮುಖ್ಯಮಂತ್ರಿ’ ಬ್ಯಾನರ್ ಹಾಕಲಾಗಿದೆ. ಅಲ್ಲದೆ, ಅದೇ ಬ್ಯಾನರ್ನಲ್ಲೇ ಬಿಜೆಪಿ ಶಾಸಕರಾದ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಹಾಗೂ ಸತೀಶ್ ಜಾರಕಿಹೊಳಿ ಅವರ ಪುತ್ರಿ, ಚಿಕ್ಕೋಡಿ ಕ್ಷೇತ್ರದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಭಾವಚಿತ್ರಗಳನ್ನು ಹಾಕಿರುವುದು ವಿಶೇಷವಾಗಿದೆ.
‘ಒಂದು ವೇಳೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯನವರು ರಾಜೀನಾಮೆ ನೀಡುವ ಪ್ರಸಂಗ ಬಂದರೆ ಸತೀಶ್ ಜಾರಕಿಹೊಳಿ ಅವರನ್ನೇ ಮುಖ್ಯಮಂತ್ರಿ ಮಾಡಬೇಕು. ಇದರಿಂದ ಉತ್ತರ ಕರ್ನಾಟಕಕ್ಕೆ ನ್ಯಾಯ ಒದಗಿಸಿದಂತೆ ಆಗುತ್ತದೆ. ಆ ನಿಟ್ಟಿನಲ್ಲಿ ಬ್ಯಾನರ್ ಹಾಕಿದ್ದೇವೆ’ ಎಂದು ಕರವೇ ಸಂಚಾಲಕ ಮಹದೇವ ತಳವಾರ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಹೊಸದಿಲ್ಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಕುತೂಹಲ ಸೃಷ್ಟಿಸಿದ್ದ ಸಚಿವ ಸತೀಶ್ ಜಾರಕಿಹೊಳಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರಿನಲ್ಲಿ ಹಲವು ಮುಖಂಡರನ್ನು ದಿಢೀರ್ ಭೇಟಿ ಮಾಡಿ ಗಮನ ಸೆಳೆದಿದ್ದರು. ಈ ಬೆಳವಣಿಗೆಗಳ ನಡುವೆಯೇ ಸಚಿವರಾದ ಡಾ.ಪರಮೇಶ್ವರ್, ಡಾ.ಎಚ್.ಸಿ.ಮಹದೇವಪ್ಪ ಸೇರಿದಂತೆ ಇನ್ನಿತರರ ಜತೆಗೂ ಸತೀಶ್ ಜಾರಕಿಹೊಳಿ ಸಭೆ ನಡೆಸಿ ಅಚ್ಚರಿ ಮೂಡಿಸಿದ್ದರು.