ಸ್ವಾತಂತ್ರ್ಯ ಹೋರಾಟಗಾರರನ್ನು ನಡೆಸಿಕೊಳ್ಳುವ ರೀತಿ ಇದೇನಾ? : ಸಾವರ್ಕರ್ ಕುರಿತ ಹೇಳಿಕೆಗೆ ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ತರಾಟೆ
ರಾಹುಲ್ ಗಾಂಧಿ ವಿರುದ್ಧದ ಸಮನ್ಸ್ಗೂ ತಡೆ

ರಾಹುಲ್ ಗಾಂಧಿ | PC : PTI
ಹೊಸ ದಿಲ್ಲಿ: ‘ಸ್ವಾತಂತ್ರ್ಯ ಹೋರಾಟಗಾರರನ್ನು ನಡೆಸಿಕೊಳ್ಳುವ ರೀತಿ ಇದೇನಾ?ʼ ಎಂದು ಸಾವರ್ಕರ್ ಕುರಿತ ಹೇಳಿಕೆ ನೀಡಿದ ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ವಿನಾಯಕ್ ದಾಮೋದರ್ ಸಾವರ್ಕರ್ ಬ್ರಿಟಿಷರ ಮಿತ್ರರಾಗಿದ್ದರು ಹಾಗೂ ಅವರು ಬ್ರಿಟಿಷರಿಂದ ಪಿಂಚಣಿ ಪಡೆಯುತ್ತಿದ್ದರು ಎಂದು ಹೇಳಿಕೆ ನೀಡಿದ್ದ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಶುಕ್ರವಾರ ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.
ಈ ಕುರಿತು ವಿಚಾರಣೆ ನಡೆಸಿದ ನ್ಯಾ. ದೀಪಂಕರ್ ದತ್ತ ಹಾಗೂ ನ್ಯಾ. ಮನಮೋಹನ್ ಅವರನ್ನೊಳಗೊಂಡಿದ್ದ ನ್ಯಾಯಪೀಠ, ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ವಿರುದ್ಧ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗಳು ಬೇಜವಾಬ್ದಾರಿಯದ್ದಾಗಿದ್ದು, ಅವರೇನಾದರೂ ಇಂತಹ ಹೇಳಿಕೆಗಳನ್ನು ನೀಡುವುದನ್ನು ಮುಂದುವರಿಸಿದರೆ, ನ್ಯಾಯಾಲಯವು ಸ್ವಯಂಪ್ರೇರಿತ ಕ್ರಮವನ್ನು ಕೈಗೊಳ್ಳಲಿದೆ ಎಂದು ರಾಹುಲ್ ಗಾಂಧಿಗೆ ಎಚ್ಚರಿಸಿತು.
ಕಾನೂನಿಗೆ ಸಂಬಂಧಿಸಿದಂತೆ ನೀವು ಉತ್ತಮ ಅಂಶವನ್ನು ಹೊಂದಿದ್ದೀರಿ ಹಾಗೂ ನೀವು ತಡೆಯಾಜ್ಞೆ ಪಡೆಯಲಿದ್ದೀರಿ. ಆದರೆ, ನೀವೇನಾದರೂ ಮುಂದೆಯೂ ಇಂತಹ ಹೇಳಿಕೆಗಳನ್ನು ನೀಡಿದರೆ, ಸ್ವಯಂಪ್ರೇರಿತವಾಗಿ ಕ್ರಮವನ್ನು ತೆಗೆದುಕೊಳ್ಳಲಾಗುವುದು. ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಯಾವುದೇ ಹೇಳಿಕೆ ನೀಡಬಾರದು. ಅವರು ನಮಗೆ ಸ್ವಾತಂತ್ರ್ಯ ನೀಡಿದ್ದು, ನಾವು ಅವರನ್ನು ಈ ರೀತಿ ನಡೆಸಿಕೊಳ್ಳುವುದಾ? ಎಂದು ಪ್ರಶ್ನಿಸಿದ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿ ಚಾಲ್ತಿಯಲ್ಲಿರುವ ಆದೇಶಕ್ಕೆ ತಡೆ ನೀಡಿ ಎಂದು ನಿರ್ದೇಶನ ನೀಡಿತು.
ಸಾವರ್ಕರ್ ಅವರನ್ನು ಪ್ರಶಂಸಿಸಿ ರಾಹುಲ್ ಗಾಂಧಿಯವರ ಅಜ್ಜಿ ಹಾಗೂ ಅವರ ತಂದೆ ಕೂಡಾ ಲೇಖನ ಬರೆದಿದ್ದಾರೆ ಎಂದು ಅವರಿಗೆ ತಡೆಯಾಜ್ಞೆ ಮಂಜೂರು ಮಾಡುವ ವೇಳೆ ನ್ಯಾಯಾಲಯ ಹೇಳಿತು.