ಹಿಮಾಚಲ ಪ್ರದೇಶ | ಮೇಘ ಸ್ಫೋಟದಲ್ಲಿ ಕೊಚ್ಚಿ ಹೋದ ಶಾಲೆ: ತಮ್ಮ ಆತ್ಮೀಯ ಗೆಳೆಯರನ್ನು ಪದೇ ನೆನಪಿಸಿಕೊಳ್ಳುತ್ತಿರುವ ಸಹಪಾಠಿಗಳು
PC : PTI
ಶಿಮ್ಲಾ : ಭೂ ಕುಸಿತದಿಂದ ತತ್ತರಿಸಿರುವ ವಯನಾಡ್ ನಿಂದ ಎದ್ದು ಬರುತ್ತಿರುವ ಹೃದಯ ವಿದ್ರಾವಕ ಕತೆಗಳು ಒಂದು ಬಗೆಯದಾದರೆ, ಮೇಘ ಸ್ಫೋಟ ಸಂಭವಿಸಿರುವ ಹಿಮಾಚಲ ಪ್ರದೇಶದಿಂದ ಕೇಳಿ ಬರುತ್ತಿರುವ ಮನಕಲಕುವ ಕತೆಗಳದ್ದು ಮತ್ತೊಂದು ಬಗೆಯಾಗಿದೆ.
ಜು.31ರ ಮಧ್ಯರಾತ್ರಿ ಸಂಭವಿಸಿದ ಮೇಘ ಸ್ಫೋಟದಲ್ಲೂ ಹಲವಾರು ಹಳ್ಳಿಗಳು ಕೊಚ್ಚಿಕೊಂಡು ಹೋಗಿವೆ. ಇದರೊಂದಿಗೆ, ಕೆಲ ಶಾಲೆಗಳೂ ಕೊಚ್ಚಿಕೊಂಡು ಹೋಗಿದ್ದು, ಈ ಪೈಕಿ ಸಮೆಜ್ ನ ಸರಕಾರಿ ಹಿರಿಯ ಪ್ರೌಢ ಶಾಲೆಯೂ ಸೇರಿದೆ. ನೋಡನೋಡುತ್ತಿದ್ದಂತೆಯೆ ಕಣ್ಣ ಮುಂದೆಯೇ ಕೊಚ್ಚಿ ಹೋದ ಆತ್ಮೀಯ ಗೆಳೆಯರನ್ನು ನೆನೆಸಿಕೊಂಡು ಈ ಶಾಲೆಯ ಸಹಪಾಠಿಗಳು ಕಣ್ಣೀರಾಗುತ್ತಿದ್ದಾರೆ.
“ನಮ್ಮ ಶಾಲೆಯು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು, ನಮ್ಮ ಶಾಲೆಯ ಎಂಟು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ. ನಾವು ಹೇಗೆ ವ್ಯಾಸಂಗ ಮಾಡುವುದು ಹಾಗೂ ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಕ್ರೀಡಾಕೂಟದಲ್ಲಿ ಹೇಗೆ ಭಾಗವಹಿಸುವುದು ಎಂಬುದೇ ನಮಗೆ ತಿಳಿಯುತ್ತಿಲ್ಲ” ಎಂದು ಭೀಕರ ದುರಂತದ ದುಸ್ವಪ್ನದಿಂದ ಇನ್ನೂ ಚೇತರಿಸಿಕೊಳ್ಳದ ವಿದ್ಯಾರ್ಥಿಗಳು ಪ್ರಶ್ನಿಲಸುತ್ತಾರೆ.
“ವಾಲಿಬಾಲ್ ಹಾಗೂ ಬ್ಯಾಡ್ಮಿಂಟನ್ ತಂಡದಲ್ಲಿ ಶಾಲೆಯ ಎಂಟು ಬಾಲಕಿಯರು ಸದಸ್ಯರಾಗಿದ್ದರು. ಈ ಪೈಕಿ ಮೂವರು ಈಗ ನಮ್ಮೊಂದಿಗಿಲ್ಲ. ಸೆಪ್ಟೆಂಬರ್ 15ರಂದು ನಿಗದಿಯಾಗಿರುವ ಕ್ರೀಡಾಕೂಟದಲ್ಲಿ ನಾವು ಹೇಗೆ ಭಾಗವಹಿಸುವುದು ಎಂಬುದೇ ತಿಳಿಯುತ್ತಿಲ್ಲ” ಎಂದು ಹತ್ತನೆಯ ತರಗತಿ ವಿದ್ಯಾರ್ಥಿನಿ ಅದಿತಿ ನೋವು ವ್ಯಕ್ತಪಡಿಸುತ್ತಾರೆ.
“ನಾವು ಒಟ್ಟಾಗಿ ಆಟ, ವ್ಯಾಸಂಗ ಹಾಗೂ ಸಮಯವನ್ನು ಕಳೆಯುತ್ತಿದ್ದೆವು. ಆದರೆ, ನನ್ನ ಗೆಳೆಯರಾದ ಅರುತಿ ಮತ್ತು ಅರುಣ್ ಈಗ ನಮ್ಮೊಂದಿಗಿಲ್ಲ” ಎಂದು ತನ್ನ ಗೆಳೆಯರನ್ನು ಪ್ರೀತಿಯಿಂದ ಸ್ಮರಿಸುವ ಒಂಭತ್ತನೆ ತರಗತಿಯ ಆಘಾತಕ್ಕೊಳಗಾಗಿರುವ ವಿದ್ಯಾರ್ಥಿ ಅಶ್ವಿನ್ ಕುಮಾರ್ ದುಗುಡಗೊಳ್ಳುತ್ತಾನೆ.
ಅರುತಿ ಮತ್ತು ಅರುಣ್ ಬಗ್ಗೆ ಒಂಬತ್ತನೆ ತರಗತಿಯ ವಿದ್ಯಾರ್ಥಿಯಾದ ಅಮನ್ ಕೂಡಾ ಇದೇ ಬಗೆಯ ನೋವನ್ನು ವ್ಯಕ್ತಪಡಿಸುತ್ತಾನೆ.
“ಈ ಶಾಲೆಯಲ್ಲಿ ಒಟ್ಟು 72 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಆದರೆ, ಈಗ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿರುವ ಎಂಟು ವಿದ್ಯಾರ್ಥಿಗಳು ಒಂಬತ್ತು, ಹತ್ತು ಹಾಗೂ ಹನ್ನೆರಡನೆ ತರಗತಿಗೆ ಸೇರಿದವರಾಗಿದ್ದಾರೆ. ಅವರೆಲ್ಲರೂ ವ್ಯಾಸಂಗ ಹಾಗೂ ಕ್ರೀಡೆ ಎರಡರಲ್ಲೂ ಅತ್ಯುತ್ತಮರಾಗಿದ್ದರು” ಎಂದು ಈ ಶಾಲೆಯ ದೈಹಿಕ ತರಬೇತಿ ಶಿಕ್ಷಕರಾದ ರವೀಂದರ್ ಹೇಳುತ್ತಾರೆ.