ಚೆನ್ನೈ-ಬೆಂಗಳೂರು ನಡುವೆ ದ್ವಿತೀಯ ವಂದೇ ಭಾರತ ರೈಲು ಸೇವೆಗೆ ಚಾಲನೆ
ವಂದೇ ಭಾರತ್ | Photo: PTI
ಚೆನ್ನೈ: ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ವರ್ಚುವಲ್ ಕಾರ್ಯಕ್ರಮದಲ್ಲಿ ಚೆನ್ನೈ-ಮೈಸೂರು ನಡುವೆ ದ್ವಿತೀಯ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆಗೆ ಹಸಿರು ನಿಶಾನೆಯನ್ನು ತೋರಿಸಿದರು.
ನೂತನ ವಂದೇ ಭಾರತ ಎಕ್ಸ್ಪ್ರೆಸ್ 2024,ಮಾ.14ರಿಂದ ತನ್ನ ನಿಯಮಿತ ಸಂಚಾರವನ್ನು ಆರಂಭಿಸಲಿದ್ದು,2014,ಎ.4ರವರೆಗೆ ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ನಿಂದ ಎಸ್ಎಮ್ವಿಟಿ ಬೆಂಗಳೂರು ನಡುವೆ ಸಂಚರಿಸಲಿದೆ. ರೈಲು ಕಟಪಾಡಿ ಮತ್ತು ಕೃಷ್ಣರಾಜಪುರಂ ನಿಲ್ದಾಣಗಳಲ್ಲಿ ನಿಲ್ಲಲಿದೆ.
2024,ಎ.5ರಿಂದ ನೂತನ ರೈಲು ಮೈಸೂರುವರೆಗೆ ಸಂಚರಿಸಲಿದೆ ಮತ್ತು ಕಟಪಾಡಿ,ಕೃಷ್ಣರಾಜಪುರಂ,ಕೆಎಸ್ಆರ್ ಬೆಂಗಳೂರು ಮತ್ತು ಮಂಡ್ಯಗಳಲ್ಲಿ ನಿಲುಗಡೆಗೊಳ್ಳಲಿದೆ ಎಂದು ದಕ್ಷಿಣ ರೈಲ್ವೆಯು ಹೇಳಿಕೆಯಲ್ಲಿ ತಿಳಿಸಿದೆ.
ಅಹ್ಮದಾಬಾದ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿಯವರು ವೀಡಿಯೊ ಲಿಂಕ್ ಮೂಲಕ 85,000 ಕೋ.ರೂ.ಗಳ ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಿದರು. ಇವುಗಳಲ್ಲಿ 10 ಹೊಸ ವಂದೇ ಭಾರತ ಎಕ್ಸ್ಪ್ರೆಸ್ ರೈಲು ಸೇವೆಗಳು ಸೇರಿವೆ.
ಈ ಸಂಬಂಧ ಇಲ್ಲಿಯ ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ,ಕೇಂದ್ರದ ಸಹಾಯಕ ಮಾಹಿತಿ ಮತ್ತು ಪ್ರಸಾರ ಸಚಿವ ಎಲ್.ಮುರುಗನ್ ಮತ್ತು ಹಿರಿಯ ರೈಲ್ವೆ ಅಧಿಕಾರಿಗಳು ಪಾಲ್ಗೊಂಡಿದ್ದರು.