ರೈಲು ನಿಲ್ದಾಣಗಳಲ್ಲಿ ಪ್ರಧಾನಿ ಭಾವಚಿತ್ರವಿರುವ ಸೆಲ್ಫಿ ಕೇಂದ್ರ : 1.68 ಕೋ.ರೂ. ವೆಚ್ಚ ಮಾಡಲಿರುವ ಕೇಂದ್ರ ರೈಲ್ವೆ
ನರೇಂದ್ರ ಮೋದಿ | Photo: X/ @Central_Railway
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರದೊಂದಿಗೆ ಜನರು ಸೆಲ್ಫಿ ತೆಗೆದುಕೊಳ್ಳಲು ರೈಲು ನಿಲ್ದಾಣಗಳಲ್ಲಿ ಫೊಟೋ ಬೂತ್ ಗಳನ್ನು ಸ್ಥಾಪಿಸಲು ಕೇಂದ್ರ ಸರಕಾರ 1.62 ಕೋ.ರೂ. ವೆಚ್ಚ ಮಾಡಲಿದೆ ಎಂದು ‘ದಿ ಹಿಂದೂ’ವರದಿ ಮಾಡಿದೆ.
ಆರ್ ಟಿ ಐ ಮಾಹಿತಿ ಪ್ರಕಾರ ಪ್ರತಿ ಶಾಶ್ವತ 3ಡಿ ಸೆಲ್ಫಿ ಬೂತ್ ಗಳಿಗೆ 6.25 ಲಕ್ಷ ರೂ. ಹಾಗೂ ಪ್ರತಿ ತಾತ್ಕಾಲಿಕ ಬೂತ್ ಗಳಿಗೆ 1.25 ಲಕ್ಷ ರೂ. ವೆಚ್ಚ ಮಾಡಲು ಕೇಂದ್ರ ಸರಕಾರ ಅನುಮೋದನೆ ನೀಡಿದೆ.
ಮುಂಬೈ, ಭುಸಾವಲ್, ನಾಗಪುರ, ಪುಣೆ ಹಾಗೂ ಸೋಲಾಪುರ-ಈ ಐದು ವಲಯಗಳ 50 ರೈಲು ನಿಲ್ದಾಣಗಳಲ್ಲಿ ಮೋದಿ ಅವರ ಭಾವಚಿತ್ರವನ್ನು ಒಳಗೊಂಡ ಸೆಲ್ಫಿ ಬೂತ್ ಗಳನ್ನು ಕೇಂದ್ರ ರೈಲ್ವೆ ಸ್ಥಾಪಿಸಿದೆ.
ಚತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್, ಕಲ್ಯಾಣ್, ನಾಗಪುರ, ಬೇತುಲ್ ಸೇರಿದಂತೆ 30 ವರ್ಗದ ‘ಎ’ ನಿಲ್ದಾಣಗಳಲ್ಲಿ ತಾತ್ಕಾಲಿಕ ಬೂತ್ ಗಳನ್ನು ಸ್ಪಾಪಿಸಲಾಗುವುದು. ಕಜ್ರಾತ್, ಕಸರಾ, ಲಾತೂರ್ ಹಾಗೂ ಕೋಪರಗಾಂವ್ ಸೇರಿದಂತೆ 20 ವರ್ಗದ ‘ಸಿ’ ನಿಲ್ದಾಣಗಳಲ್ಲಿ ಶಾಶ್ವದ ಬೂತ್ ಗಳನ್ನು ಸ್ಥಾಪಿಸಲಾಗುವುದು.
ನಿವೃತ್ತ ರೈಲ್ವೆ ಅಧಿಕಾರಿ ಅಜಯ್ ಬೋಸ್ ಆರ್ ಟಿ ಐ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಸೆಲ್ಫಿ ಕೇಂದ್ರಗಳ ಒಟ್ಟು ವೆಚ್ಚವನ್ನು ಉತ್ತರ, ದಕ್ಷಿಣ ಹಾಗೂ ಪಶ್ಚಿಮ ರೈಲ್ವೆಗಳು ಬಹಿರಂಗಪಡಿಸಿಲ್ಲ ಎಂದು ಅವರು ಹೇಳಿದ್ದರು.
ಆದರೆ, ಬೋಸ್ ಪ್ರಶ್ನೆಗೆ ಉತ್ತರಿಸಿದ ಉತ್ತರ ರೈಲ್ವೆ, ಮೋದಿ ಅವರ ಭಾವಚಿತ್ರವನ್ನು ಒಳಗೊಂಡ ಬೂತ್ ಗಳನ್ನು ಸುಮಾರು 100 ಸ್ಥಳಗಳಲ್ಲಿ ಆರಂಭಿಸಲಾಗುವುದು ಎಂದು ಹೇಳಿದೆ. ಡೆಹ್ರಾಡೂನ್, ಅಂಬಾಲ, ಹೊಸದಿಲ್ಲಿ, ಅಮೃತಸರ, ಅಯೋಧ್ಯೆ ಹಾಗೂ ಚತ್ತೀಸಗಢದ ರೈಲ್ವೆ ನಿಲ್ದಾಣಗಳಲ್ಲಿ ಮೂರು ಸೆಲ್ಫಿ ಬೂತ್ ಗಳ್ನು ಆರಂಭಿಸಲಾಗುವುದು ಎಂದು ಅದು ತಿಳಿಸಿದೆ.