ಶಿವಸೇನೆ ನಾಯಕನಿಗೆ ಸೇರಿದ ಕಾರು ಢಿಕ್ಕಿ; ಮಹಿಳೆ ಮೃತ್ಯು
ಮಹಾರಾಷ್ಟ್ರದಲ್ಲಿ ಮತ್ತೊಂದು ‘ಹಿಟ್ ಆ್ಯಂಡ್ ರನ್’ ಪ್ರಕರಣ
Photo : indianexpress
ಮುಂಬೈ : ಮಹಾರಾಷ್ಟ್ರದಲ್ಲಿ ಮತ್ತೊಂದು ‘ಹಿಟ್ ಆ್ಯಂಡ್ ರನ್’ ಪ್ರಕರಣ ವರದಿಯಾಗಿದೆ. ಮುಂಬೈಯ ವರ್ಲಿ ಪ್ರದೇಶದಲ್ಲಿ ರವಿವಾರ ಬಿಎಂಡಬ್ಲ್ಯು ಕಾರೊಂದು ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ಮೃತಪಟ್ಟಿದ್ದು, ಅವರ ಅವರ ಪತಿ ಗಾಯಗೊಂಡಿದ್ದಾರೆ.
ಮೃತಪಟ್ಟ ಮಹಿಳೆಯನ್ನು ವರ್ಲಿಯ ಕೋಲಿವಾಡ ನಿವಾಸಿ ಕಾವೇರಿ ನಖ್ವಾ (45) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಅವರ ಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದಂಪತಿ ಮೀನು ಖರೀದಿಸಿ ಬೆಳಗ್ಗೆ 5.30ರ ಸುಮಾರಿಗೆ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಆಟ್ರಿಯಾ ಮಾಲ್ ಬಳಿ ವೇಗವಾಗಿ ಬಂದ ಬಿಎಂಡಬ್ಲ್ಯು ಕಾರು ಬೈಕ್ ಗೆ ಹಿಂದಿನಿಂದ ಢಿಕ್ಕಿ ಹೊಡೆದಿದೆ. ಈ ಸಂದರ್ಭ ಪತಿ ಬೈಕ್ ನಿಂದ ಹಾರಿ ಜೀವ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕಾರು ನಖ್ವಾ ಅವರನ್ನು 100 ಮೀಟರ್ ವರೆಗೆ ಎಳೆದೊಯ್ದಿತು. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ನಖ್ವಾ ಹಾಗೂ ಅವರ ಪತಿಯನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದರು. ಆದರೆ, ನಖ್ವಾ ಅವರು ಚಿಕಿತ್ಸೆ ವೇಳೆ ಮೃತಪಟ್ಟರು. ಅವರ ಪತಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಅಪಘಾತದ ಬಳಿಕ ಪರಾರಿಯಾದ ಕಾರು ಹಾಗೂ ಅದರ ಚಾಲಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಕಾರು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣದ ಹಿರಿಯ ನಾಯಕ ರಾಜೇಶ್ ಶಾಹ್ ಅವರಿಗೆ ಸೇರಿದೆ. ಅಪಘಾತ ನಡೆಯುವ ಸಂದರ್ಭ ಕಾರನ್ನು ಅವರ ಪುತ್ರ 24 ವರ್ಷದ ಮಿಹಿರ್ ಶಾ ಚಲಾಯಿಸುತ್ತಿದ್ದ ಹಾಗೂ ಆತ ಮತ್ತನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪುಣೆಯಲ್ಲಿ ಮೇ 19ರಂದು ನಡೆದಿದ್ದ ಪೋಶೆ ಕಾರು ಅಪಘಾತದಲ್ಲಿ ಇಬ್ಬರು ಟೆಕ್ಕಿಗಳು ಮೃತಪಟ್ಟಿದ್ದರು. ಇದಾದ ಕೇವಲ ಎರಡು ತಿಂಗಳ ಬಳಿಕ ಈ ಅಪಘಾತ ನಡೆದಿದೆ.
ಘಟನೆಗೆ ಸಂಬಂಧಿಸಿ ತಪ್ಪೆಸಗಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಪ್ರತಿಯೊಬ್ಬರನ್ನೂ ಸಮಾನವಾಗಿ ಪರಿಗಣಿಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಹೇಳಿದ್ದಾರೆ.