ಬಸ್ ಗಳಲ್ಲಿ ಸರಣಿ ಸ್ಪೋಟ; ವೆಸ್ಟ್ ಬ್ಯಾಂಕ್ ನಲ್ಲಿ ಕಾರ್ಯಾಚರಣೆ ನಡೆಸುವಂತೆ ಸೇನೆಗೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಸೂಚನೆ

PC: x.com/NBCNewsWorld
ಜೆರುಸಲೇಮ್: ಇಸ್ರೇಲ್ ನ ಟೆಲ್ ಅವೀವ್ ಬಳಿ ಡಿಪೋದಲ್ಲಿ ನಿಂತಿದ್ದ ಬಸ್ಗಳಲ್ಲಿ ಗುರುವಾರ ಸರಣಿ ಸ್ಫೋಟಗಳು ಸಂಭವಿಸಿದೆ. ಸ್ಫೋಟಗಳಲ್ಲಿ ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇಸ್ರೇಲ್ ನ ಟೆಲ್ ಅವೀವ್ನ ಹೊರಗಿನ ಎರಡು ಉಪನಗರಗಳಲ್ಲಿ ಮೂರು ಬಸ್ಗಳಲ್ಲಿ ಸ್ಫೋಟಗಳು ಸಂಭವಿಸಿವೆ. ನಾಲ್ಕು ಸ್ಫೋಟಕ ಸಾಧನಗಳು ಕಂಡುಬಂದಿವೆ ಎಂದು ಇಸ್ರೇಲ್ ಪೊಲೀಸರು ಈ ಹಿಂದೆ ಹೇಳಿದ್ದರು. ಆದರೆ ಡಿಪೋಗಳಲ್ಲಿನ ಬಸ್ಗಳಲ್ಲಿ ಸ್ಫೋಟಗಳು ಸಂಭವಿಸಿವೆ. ಅವು ಖಾಲಿಯಾಗಿದ್ದವು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸ್ಫೋಟಗಳಿಗೆ ಹೊಣೆ ಹೊತ್ತು ಯಾರೂ ಇದುವರೆಗೆ ಅಧಿಕೃತ ಹೇಳಿಕೆ ನೀಡಿಲ್ಲ. ಸ್ಫೋಟಗಳ ನಂತರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ರಕ್ಷಣಾ ಸಚಿವರು, ಮಿಲಿಟರಿ ಮುಖ್ಯಸ್ಥರು ಮತ್ತು ಶಿನ್ ಬೆಟ್ ಮತ್ತು ಪೊಲೀಸ್ ಆಯುಕ್ತರನ್ನು ಭೇಟಿಯಾದರು ಎಂದು ಅವರ ಕಚೇರಿ ತಿಳಿಸಿದೆ.
ದಾಳಿಯ ನಂತರ ಪ್ರತಕ್ರಿಯಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವೆಸ್ಟ್ ಬ್ಯಾಂಕ್ನಲ್ಲಿ ಕಾರ್ಯಾಚರಣೆಯನ್ನು ನಡೆಸುವಂತೆ ಸೇನೆಗೆ ಸೂಚನೆ ನೀಡಿದ್ದಾರೆ. ನೆತನ್ಯಾಹು ಅವರ ಕಚೇರಿಯು ಈ ಘಟನೆಯನ್ನು ಸಾಮೂಹಿಕ ದಾಳಿಯ ಪ್ರಯತ್ನ ಎಂದು ಬಣ್ಣಿಸಿದೆ.
ಪಶ್ಚಿಮ ದಂಡೆಯಲ್ಲಿ ಸಶಸ್ತ್ರ ಹೋರಾಟಗಾರರ ನಿಗ್ರಹ ಕಾರ್ಯಾಚರಣೆಯನ್ನು ತೀವ್ರಗೊಳಿಸುವುದಾಗಿ ಮತ್ತು ಕೆಲವು ಪ್ರದೇಶಗಳಲ್ಲಿ ಪ್ರವೇಶ ದ್ವಾರಗಳನ್ನು ನಿರ್ಬಂಧಿಸುವುದಾಗಿ ಸೇನೆಯು ತಿಳಿಸಿದೆ. ಕಳೆದ ಒಂದು ತಿಂಗಳಿನಿಂದ ಪಶ್ಚಿಮ ದಂಡೆಯಲ್ಲಿ ಮಿಲಿಟರಿ ದೊಡ್ಡ ಪ್ರಮಾಣದಲ್ಲಿ ಸಶಸ್ತ್ರ ಹೋರಾಟಗಾರರನ್ನು ಗುರಿಯಾಗಿಸಿ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
16 ತಿಂಗಳ ಯುದ್ಧದ ನಂತರ ಫೆಲೆಸ್ತೀನಿನ ಹಮಾಸ್ ಮತ್ತು ಇಸ್ರೇಲ್ ನಡುವೆ ಗಾಝಾದಲ್ಲಿ ಕದನ ವಿರಾಮವು ಜ.19ರಂದು ಜಾರಿಗೆ ಬಂದಿದೆ. ಪರಸ್ಪರ ಕದನ ವಿರಾಮದ ಉಲ್ಲಂಘನೆಗಳ ಆರೋಪಗಳಿದ್ದರೂ, ಕದನ ವಿರಾಮ ಮುಂದುವರೆದಿದೆ. ಈ ನಡುವೆ ನಡುವೆ ಬಸ್ ಸ್ಫೋಟಗಳು ಸಂಭವಿಸಿರುವುದು ಆತಂಕಕ್ಕೆ ಎಡೆಮಾಡಿದೆ.