ಶೇ.67ಕ್ಕಿಂತ ಹೆಚ್ಚಿನ ಒಳಚರಂಡಿ, ಸೆಪ್ಟಿಕ್ ಟ್ಯಾಂಕ್ ಕಾರ್ಮಿಕರು ಎಸ್ಸಿ ವರ್ಗಕ್ಕೆ ಸೇರಿದವರು: ಕೇಂದ್ರ ಸರಕಾರ
ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಸರಕಾರದ ಅಧಿಕೃತ ಮಾಹಿತಿಯ ಪ್ರಕಾರ ಭಾರತದಲ್ಲಿ ಶೇ.67ಕ್ಕಿಂತ ಹೆಚ್ಚಿನ ಒಳಚರಂಡಿ ಮತ್ತು ಮಲಗುಂಡಿ ಕಾರ್ಮಿಕರು ಪರಿಶಿಷ್ಟ ಜಾತಿ(ಎಸ್ಸಿ)ಗಳ ವರ್ಗಕ್ಕೆ ಸೇರಿದವರಾಗಿದ್ದಾರೆ.
ಸಹಾಯಕ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ರಾಮದಾಸ ಆಠವಳೆಯವರು ಲೋಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ, ದೃಢಪಟ್ಟಿರುವ 54,574 ಒಳಚರಂಡಿ ಮತ್ತು ಮಲಗುಂಡಿ ಕಾರ್ಮಿಕರನ್ನು ‘ಯಾಂತ್ರೀಕೃತ ನೈರ್ಮಲ್ಯ ಪರಿಸರ ವ್ಯವಸ್ಥೆಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ(ನಮಸ್ತೆ)’ಯ ವ್ಯಾಪ್ತಿಗೊಳಪಡಿಸಲಾಗಿದ್ದು, ಈ ಪೈಕಿ 37,060 ಕಾರ್ಮಿಕರು ಎಸ್ಸಿ ವರ್ಗಕ್ಕೆ ಸೇರಿದವರಾಗಿದ್ದಾರೆ ಎಂದು ತಿಳಿಸಿದರು.
ಶೇ.15.73ರಷ್ಟು ಕಾರ್ಮಿಕರು ಇತರ ಹಿಂದುಳಿದ ವರ್ಗ(ಒಬಿಸಿ)ಗಳಿಗೆ, ಶೇ.8.31ರಷ್ಟು ಪರಿಶಿಷ್ಟ ಪಂಗಡ(ಎಸ್ಟಿ)ಗಳಿಗೆ ಮತ್ತು ಕೇವಲ ಶೇ.8.05ರಷ್ಟು ಕಾರ್ಮಿಕರು ಸಾಮಾನ್ಯ ವರ್ಗಕ್ಕೆ ಸೇರಿದವರಾಗಿದ್ದಾರೆ ಎನ್ನುವುದನ್ನು ಅಂಕಿಅಂಶಗಳು ತೋರಿಸಿವೆ.
33 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 57,758 ಕಾರ್ಮಿಕರನ್ನು ಗುರುತಿಸಲಾಗಿದ್ದು,ಈ ಪೈಕಿ 54,574 ಜನರನ್ನು ದೃಢೀಕರಿಸಲಾಗಿದೆ. ಒಡಿಶಾ ಮತ್ತು ತಮಿಳುನಾಡಿನಂತಹ ರಾಜ್ಯಗಳಿಗಾಗಿ ಕೇಂದ್ರೀಯ ನಮಸ್ತೆ ದತ್ತಾಂಶ ಕೋಶಕ್ಕೆ ಮಾಹಿತಿಗಳ ಸಂಚಯ ಕಾರ್ಯ ಪ್ರಸ್ತುತ ಪ್ರಗತಿಯಲ್ಲಿದೆ.
2023-24ಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಸಹಭಾಗಿತ್ವದೊಂದಿಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಆರಂಭಿಸಿದ ನಮಸ್ತೆ ಯೋಜನೆಯು ನೈರ್ಮಲ್ಯ ಕಾರ್ಮಿಕರ ಸುರಕ್ಷತೆ,ಘನತೆ ಮತ್ತು ಸಬಲೀಕರಣವನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ.
ಯೋಜನೆಯಡಿ ಕಾರ್ಮಿಕರ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಸಾಮಾಜಿಕ-ಆರ್ಥಿಕ ಅವಕಾಶಗಳನ್ನು ಒದಗಿಸಲು ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ.
ತುರ್ತು ಪ್ರತಿಕ್ರಿಯಾ ನೈರ್ಮಲ್ಯ ಘಟಕಗಳಿಗೆ ಒಟ್ಟು 16,791 ಪಿಪಿಇ ಕಿಟ್ಗಳು ಮತ್ತು 43 ಸುರಕ್ಷಾ ಸಾಧನಗಳನ್ನು ವಿತರಿಸಲಾಗಿದೆ. 13,604 ಫಲಾನುಭವಿಗಳಿಗೆ ಆರೋಗ್ಯ ವಿಮೆಗಾಗಿ ಆಯುಷ್ಮಾನ್ ಕಾರ್ಡ್ಗಳನ್ನು ನೀಡಲಾಗಿದೆ. ನೈರ್ಮಲ್ಯ ಸಂಬಂಧಿತ ಯೋಜನೆಗಳಿಗಾಗಿ 503 ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ ಒಟ್ಟು 13.96 ಕೋ.ರೂ.ಗಳ ಬಂಡವಾಳ ಸಬ್ಸಿಡಿಗಳನ್ನು ಒದಗಿಸಲಾಗಿದೆ. ಪರ್ಯಾಯ ಸ್ವಯಂ-ಉದ್ಯೋಗ ಯೋಜನೆಗಳಿಗಾಗಿ ಮ್ಯಾನ್ಯುವಲ್ ಸ್ಕ್ಯಾವೆಂಜರ್ ವರ್ಗದ 226 ಫಲಾನುಭವಿಗಳಿಗೆ ಹೆಚ್ಚುವರಿ 2.85 ಕೋ.ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ.
ಯೋಜನೆ ಆರಂಭಗೊಂಡಾಗಿನಿಂದ ಅಸುರಕ್ಷಿತ ಸ್ವಚ್ಛತಾ ಪದ್ಧತಿಗಳ ಅಪಾಯಗಳ ಬಗ್ಗೆ ಜಾಗ್ರತಿಯನ್ನು ಹೆಚ್ಚಿಸಲು 837 ಕಾರ್ಯಾಗಾರಗಳನ್ನು ನಡೆಸಲಾಗಿದೆ. ನೈರ್ಮಲ್ಯ ಕಾರ್ಯವನ್ನು ಯಾಂತ್ರೀಕರಿಸುವುದಕ್ಕೆ ಮತ್ತು ಅಪಾಯಕಾರಿ ದೈಹಿಕವಾಗಿ ಸ್ವಚ್ಛಗೊಳಿಸುವುದನ್ನು ಕಡಿಮೆ ಮಾಡುವ ಪ್ರಯತ್ನಗಳಿಗೆ ಆದ್ಯತೆ ನೀಡಲಾಗಿದೆ. ಸ್ವಚ್ಛ ಭಾರತ ಯೋಜನೆಯಡಿ 26 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಲಗುಂಡಿಗಳ ಸ್ವಚ್ಛತೆಗಾಗಿ 2,585 ಡಿಸ್ಲಜಿಂಗ್ ವಾಹನಗಳ ಖರೀದಿಗಾಗಿ 371 ಕೋ.ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದೂ ಸಚಿವರ ಉತ್ತರದಲ್ಲಿ ತಿಳಿಸಲಾಗಿದೆ.