ಪ್ರೊಫೆಸರ್ ನಿಂದ ಲೈಂಗಿಕ ಕಿರುಕುಳ: 500 ವಿದ್ಯಾರ್ಥಿನಿಯರಿಂದ ಸಿಎಂಗೆ ಪತ್ರ
ಗುರುಗಾಂವ್: ಸಿರ್ಸಾದ ಚೌಧರಿ ದೇವಿಲಾಲ್ ವಿಶ್ವವಿದ್ಯಾನಿಲಯದ 500 ವಿದ್ಯಾರ್ಥಿನಿಯರು ಹರ್ಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್, ಅಲ್ಲಿನ ರಾಜ್ಯಪಾಲರು ಹಾಗೂ ಮಹಿಳಾ ಆಯೋಗಕ್ಕೆ ಪತ್ರ ಬರೆದು, ಪ್ರೊಫೆಸರ್ ಒಬ್ಬರು ತಮ್ಮ ಚೇಂಬರ್ ಗೆ ಕರೆದು ಹಲವು ದಿನಗಳ ಕಾಲ ಲೈಂಗಿಕ ಕಿರುಕುಳ ನೀಡಿದ್ದಾಗಿ ಆಪಾದಿಸಿದ್ದಾರೆ.
ಗುರುವಾರ ಈ ಪತ್ರ ಬರಯಲಾಗಿದ್ದು, ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ದೂರಿನ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸಲಾಗಿದೆ.
ಇದು ವಿದ್ಯಾರ್ಥಿನಿಯರು ಬರೆದ ನಾಲ್ಕನೇ ಪತ್ರವಾಗಿದ್ದು, ವಿಶ್ವವಿದ್ಯಾನಿಲಯದ ಆಂತರಿಕ ದೂರು ಸಮಿತಿ ಎರಡು ಬಾರಿ ಈ ಬಗ್ಗೆ ಪ್ರೊಫೆಸರ್ ಗೆ ಕ್ಲೀನ್ ಚಿಟ್ ನೀಡಿದೆ. ಪ್ರಾಥಮಿಕ ತನಿಖೆ ನಡೆಸಿದ ಬಳಿಕವಷ್ಟೇ ಎಫ್ಐಆರ್ ದಾಖಲಿಸಲು ಸಾಧ್ಯ ಎಂದು ಎಎಸ್ಪಿ ದೀಪ್ತಿ ಗರ್ಗ್ ಹೇಳಿದ್ದಾರೆ.
ಆರೋಪಿ ಪ್ರೊಫೆಸರ್ ಈ ಆರೋಪಗಳನ್ನು ನಿರಾಕರಿಸಿದ್ದು, "ಇದು ರಾಜಕೀಯ ದುರುದ್ದೇಶದ ಕ್ರಮ" ಎಂದು ಹೇಳಿದ್ದಾರೆ. "ನಾನು ವಿವಿಯಲ್ಲಿ ಕೆಲ ಕಾರ್ಯಗಳಲ್ಲಿ ಸಕ್ರಿಯವಾಗಿರುವುದರಿಂದ ನನ್ನನ್ನು ಗುರಿ ಮಡಲಾಗಿದೆ. ನಾನು ಯಾವುದೇ ತನಿಖೆ ಎದುರಿಸಲು ಸಿದ್ಧ. ಇದು ರಾಜಕೀಯ ದ್ವೇಷವಲ್ಲದೇ ಬೇರೇನೂ ಅಲ್ಲ" ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಪ್ರೊಫೆಸರ್ ವಿರುದ್ಧ ಬರೆಯಲಾಗಿರುವ ನಾಲ್ಕೂ ಪತ್ರಗಳು ಖೈರ್ ಪುರ ಅಂಚೆ ಕಚೇರಿಯಿಂದ ಪೋಸ್ಟ್ ಆಗಿವೆ. ಮೊದಲ ಪತ್ರ ಕಳೆದ ವರ್ಷ ಕುಲಪತಿಗಳಿಗೆ ಬಂದಾಗ ತನಿಖೆ ನಡೆಸಲಾಗಿತ್ತು. ಆದರೆ ಈ ಆರೋಪಕ್ಕೆ ಯಾವ ಪುರಾವೆಯೂ ಸಿಗಲಿಲ್ಲ ಎಂದು ವಿವಿ ಮೂಲಗಳು ಹೇಳಿವೆ. ಕಳೆದ ನವೆಂಬರ್ ಹಾಗೂ ಡಿಸೆಂಬರ್ ನಲ್ಲಿ ರಾಜ್ಯಪಾಲರಿಗೆ ಇಂಥ ಎರಡು ಪತ್ರ ಬಂದಿತ್ತು. ವಿವಿ ಮತ್ತೆ ತನಿಖೆ ನಡೆಸಿದಾಗಲೂ ಯಾವುದೇ ಪುರಾವೆ ಸಿಗದೇ ಕ್ಲೀನ್ ಚಿಟ್ ನೀಡಲಾಗಿತ್ತು.
ನಾಲ್ಕನೇ ಪತ್ರದಲ್ಲಿ ಈ ಪ್ರೊಫೆಸರ್ ವಿರುದ್ಧ ವಿದ್ಯಾರ್ಥಿನಿಯರನ್ನು ಅಸಭ್ಯವಾಗಿ ನಡೆಸಿಕೊಳ್ಳಲಾಗುತ್ತಿತ್ತು ಎಂದು ಆಪಾದಿಸಲಾಗಿದೆ. "ನಮ್ಮನ್ನು ತಮ್ಮ ಕಚೇರಿಯ ಬಾತ್ ರೂಂ ಗೆ ಕರೆಸಿಕೊಂಡು ಅಸಭ್ಯವಾಗಿ ಸ್ಪರ್ಶಿಸಲಾಗುತ್ತಿತ್ತು. ನಾವು ಪ್ರತಿಭಟಿಸಿದರೆ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಬೆದರಿಕೆ ಹಾಕುತ್ತಿದ್ದರು" ಎಂದು ಆಪಾದಿಸಲಾಗಿದೆ.
ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಎಲ್ಲ ಪುರಾವೆಗಳನ್ನು ಇವರು ನಾಶಪಡಿಸಿದ್ದಾರೆ ಎನ್ನುವುದು ವಿದ್ಯಾರ್ಥಿನಿಯರ ಆರೋಪ.