ಲೈಂಗಿಕ ಕಿರುಕುಳ ಪ್ರಕರಣದ ಕಡತ ತಡೆಹಿಡಿದ ಕೇಜ್ರಿವಾಲ್: ಲೆಫ್ಟಿನೆಂಟ್ ಗವರ್ನರ್ ಹೊಸ ಆರೋಪ
Photo: PTI
ಹೊಸದಿಲ್ಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಗುರುವಾರ ಹೊಸ ಆರೋಪ ಮಾಡಿರುವ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ, "ಬಾಬಾಸಾಹೇಬ್ ಅಂಬೇಡ್ಕರ್ ವೈದ್ಯಕೀಯ ಕಾಲೇಜಿನ ಲೈಂಗಿಕ ಹಗರಣಕ್ಕೆ ಸಂಬಂಧಿಸಿದ ಕಡತವನ್ನು ದೆಹಲಿ ಸರ್ಕಾರ ತಡೆಹಿಡಿದಿದೆ" ಎಂದು ಆಪಾದಿಸಿದ್ದಾರೆ.
ಆರೋಪಿ ಪ್ರಿನ್ಸಿಪಾಲ್ ವರ್ಗಾವಣೆಗೆ ಸಂಬಂಧಿಸಿದ ಕಡತಗಳನ್ನು ಕೇಜ್ರಿವಾಲ್ 45 ದಿನಗಳಿಂದ ತಡೆ ಹಿಡಿದಿದ್ದಾರೆಎಂದು ಅವರು ದೂರಿದ್ದಾರೆ. ಹಗರಣದ ಆರೋಪಿ ವಿರುದ್ಧ ಲೆಫ್ಟಿನೆಂಟ್ ಗವರ್ನರ್ ಕ್ರಮ ಕೈಗೊಳ್ಳಬೇಕು ಎಂದು ದೆಹಲಿ ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಆಗ್ರಹಿಸಿದ ಬೆನ್ನಲ್ಲೇ ಲೆಫ್ಟಿನೆಂಟ್ ಗವರ್ನರ್ ಈ ಹೊಸ ಆರೋಪ ಮಾಡಿದ್ದಾರೆ.
"ದೆಹಲಿಯ ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಅವರು ಬಾಬಾಸಾಹೇಬ್ ಅಂಬೇಡ್ಕರ್ ವೈದ್ಯಕೀಯ ಕಾಲೇಜಿನ ಲೈಂಗಿಕ ಹಗರಣದ ಬಗ್ಗೆ ಸುಳ್ಳು ಆರೋಪ ಮಾಡುತ್ತಿದ್ದು, ಪ್ರಾಚಾರ್ಯರ ಅಮಾನತಿಗೆ ಆಗ್ರಹಿಸುತ್ತಿದ್ದರೂ, ಆರೋಪಿ ಪ್ರಾಚಾರ್ಯರ ವರ್ಗಾವಣೆ ಕಡತ 45 ದಿನಗಳಿಂದ ಸಿಎಂ ಕೇಜ್ರಿವಾಲ್ ವರ ಬಳಿಯೇ ಇದೆ" ಎಂದು ಲೆಫ್ಟಿನೆಂಟ್ ಗವರ್ನರ್ ಕಚೇರಿಯ ಹೇಳಿಕೆಯಲ್ಲಿ ವಿವರಿಸಲಾಗಿದೆ.
ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರಿಗೆ ಮಾರ್ಚ್ 20ರಂದು ಪತ್ರ ಬರೆದ ಸೌರಭ್ ಭಾರದ್ವಾಜ್, ಪ್ರಕರಣದ ಸಂತ್ರಸ್ತೆ ಯುವತಿಗೆ ಸಹಕಾರ ನೀಡುತ್ತಿಲ್ಲ. ಇದು ಪ್ರಕರಣ ಮುಂದುವರಿಸಲು ತಡೆಯಾಗಿದೆ. ಆದ್ದರಿಂದ ಆರೋಪಿ ಪ್ರಾಚಾರ್ಯ ಈಶ್ವರ್ ಸಿಂಗ್ ಅವರನ್ನು ತಕ್ಷಣ ಆ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದರು.