‘ನಾಚಿಕೆಗೇಡು’: ತನ್ನ ಅನುಕರಣೆ ಮಾಡಿದ ಟಿಎಂಸಿ ಸಂಸದನ ವಿರುದ್ಧ ರಾಜ್ಯಸಭೆ ಸಭಾಪತಿ ಆಕ್ರೋಶ
Photo: PTI
ಹೊಸದಿಲ್ಲಿ: ಸಂಸತ್ತಿನ ಹೊರಗೆ ತನ್ನ ಅನುಕರಣೆಯನ್ನು ಮಾಡಿದ್ದಕ್ಕಾಗಿ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿಯವರನ್ನು ರಾಜ್ಯಸಭೆಯ ಸಭಾಪತಿ ಜಗದೀಪ ಧನ್ಕರ್ ಅವರು ಮಂಗಳವಾರ ತರಾಟೆಗೆತ್ತಿಕೊಂಡಿದ್ದಾರೆ. ಲೋಕಸಭೆ ಮತ್ತು ರಾಜ್ಯಸಭೆಯಿಂದ ಪ್ರತಿಪಕ್ಷ ಸದಸ್ಯರ ಅಮಾನತನ್ನು ವಿರೋಧಿಸಿ ಸಂಸತ್ತಿನ ಹೊರಗೆ ವಿಪಕ್ಷಗಳ ಪ್ರತಿಭನೆ ಸಂದರ್ಭ ಬ್ಯಾನರ್ಜಿಯವರು ಮಿಮಿಕ್ರಿಯನ್ನು ಮಾಡಿದ್ದು, ಸಂಸದರು ನಗೆಗಡಲಲ್ಲಿ ಮುಳುಗಿದ್ದರು. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇದನ್ನು ವೀಡಿಯೊ ಚಿತ್ರೀಕರಿಸಿದ್ದರು.
ಓರ್ವ ಸಂಸದರು ಅಪಹಾಸ್ಯ ಮಾಡಿದ್ದು ಮತ್ತು ಇನ್ನೋರ್ವ ಸಂಸದರು ಅದನ್ನು ಚಿತ್ರೀಕರಿಸಿದ್ದು ನಾಚಿಕೆಗೇಡು, ಹಾಸ್ಯಾಸ್ಪದ ಮತ್ತು ಅಸ್ವೀಕಾರಾರ್ಹವಾಗಿದೆ ಎಂದು ಧನ್ಕರ್ ಹೇಳಿದರು.
ಯಾವುದೇ ಪೂರ್ವಸಿದ್ಧತೆಯಿಲ್ಲದೆ ಧನ್ಕರ್ ಅವರ ಮಿಮಿಕ್ರಿ ಮಾಡಿದ ಬ್ಯಾನರ್ಜಿ ಕಳೆದ ಕೆಲವು ದಿನಗಳಿಂದ ಹಲವಾರು ಮುಂದೂಡಿಕೆಗಳಿಗೆ ಸಾಕ್ಷಿಯಾಗಿರುವ ಸಂಸತ್ತಿನ ಕಲಾಪಗಳನ್ನು ಅಭಿವ್ಯಕ್ತಿಸಿದ್ದರು. ಡಿ.13ರ ಸಂಸತ್ ಭದ್ರತಾ ವೈಫಲ್ಯದ ಕುರಿತು ಗೃಹಸಚಿವ ಅಮಿತ್ ಶಾ ಅವರ ಹೇಳಿಕೆಗಾಗಿ ಆಗ್ರಹಿಸಿ ಪ್ರತಿಪಕ್ಷಗಳು ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿವೆ.
ಘಟನೆಗೆ ಸಂಬಂಧಿಸಿದಂತೆ ಪ್ರತಿಪಕ್ಷ ಸಂಸದರ ವಿರುದ್ಧ ಕಿಡಿಕಾರಿರುವ ಬಿಜೆಪಿಯು,ಸಂಸದೀಯ ಪ್ರಜಾಪ್ರಭುತ್ವವನ್ನು ಕನಿಷ್ಠ ಮಟ್ಟಕ್ಕಿಳಿಸಲಾಗಿದೆ ಎಂದು ಹೇಳಿದೆ.
ವಿವಿಧ ಪ್ರತಿಪಕ್ಷಗಳ 92 ಸಂಸದರ ಅಮಾನತನ್ನು ವಿರೋಧಿಸಿ ವಿಪಕ್ಷಗಳು ನಿನ್ನೆಯಿಂದ ಸಂಸತ್ತಿನ ಹೊರಗೆ ಪ್ರತಿಭಟನೆಯನ್ನು ನಡೆಸುತ್ತಿವೆ. ಮಂಗಳವಾರ ಇನ್ನೂ 49 ಸಂಸದರನ್ನು ಅಮಾನತುಗೊಳಿಸಲಾಗಿದ್ದು,ಇದರೊಂದಿಗೆ ಅಮಾನತುಗೊಂಡಿರುವ ಸದಸ್ಯರ ಸಂಖ್ಯೆ ದಾಖಲೆಯ 141ಕ್ಕೇರಿದೆ.
TMC MP Kalyan Banerjee imitated Vice President Jagdeep Dhankar while Rahul Gandhi recorded it. What are your thoughts on this? #Parliament #ParliamentSuspended
— Anil Tiwari (@Anil_Kumar_ti) December 19, 2023
pic.twitter.com/UROhv8bcIV