ಅಪೂರ್ಣ ರಾಮ ಮಂದಿರದಲ್ಲಿ ಪೂಜೆ ಸಲ್ಲಿಸಲು ಸಾಧ್ಯವಿಲ್ಲ : ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ
ಅಯೋಧ್ಯೆಗೆ ಬಂದರೂ ರಾಮ ಮಂದಿರಕ್ಕೆ ಭೇಟಿ ನೀಡದ ಸ್ವಾಮೀಜಿ
ಉತ್ತರಾಖಂಡದ ಬದರಿಕಾಶ್ರಮ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಮಹಾರಾಜ್ | PC : PTI
ಲಕ್ನೋ : ಉತ್ತರಾಖಂಡದ ಬದರಿಕಾಶ್ರಮ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಮಹಾರಾಜ್ ಅವರು ರವಿವಾರ ಅಯೋಧ್ಯೆಗೆ ಭೇಟಿ ನೀಡಿದ್ದರೂ, ‘ಅಪೂರ್ಣ’ ಎಂದು ಹೇಳಿ ರಾಮಮಂದಿರಕ್ಕೆ ಭೇಟಿ ನೀಡಲಿಲ್ಲ.
ಅಯೋಧ್ಯೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಂಕರಾಚಾರ್ಯರು ‘ಧ್ವಜ’ (ದೇವಾಲಯದ ಮೇಲಿನ ಭಾಗ) ಯಾವುದೇ ದೇವಾಲಯದ ಅತ್ಯಂತ ಪ್ರಮುಖ ಭಾಗವಾಗಿದೆ. ‘ಧ್ವಜ’ ಇಲ್ಲದೆ ದೇವಾಲಯವು ಪರಿಪೂರ್ಣ ಎಂದು ಪರಿಗಣಿಸಲಾಗುವುದಿಲ್ಲ.
‘‘ಧ್ವಜದ ದರ್ಶನ ಕಡ್ಡಾಯ... .ನಾನು ಧ್ವಜದ ದರ್ಶನ ಮಾಡದಿದ್ದರೆ ನಾನು ಅಲ್ಲಿ (ರಾಮ ಮಂದಿರ) ಏನು ಮಾಡುತ್ತೇನೆ,’’ ಎಂದು ಅವರು ಹೇಳಿದ್ದಾರೆ.
ಪೂರ್ಣಗೊಂಡ ನಂತರವಷ್ಟೇ ರಾಮಮಂದಿರಕ್ಕೆ ಪೂಜೆ ಸಲ್ಲಿಸುವುದಾಗಿ ಶಂಕರಾಚಾರ್ಯರು ತಿಳಿಸಿದ್ದಾರೆ.
ಅಯೋಧ್ಯೆಯ ರಾಮ ಮಂದಿರದ ಸಮೀಪದಲ್ಲಿರುವ ಖೇರೇಶ್ವರ ಮಹಾದೇವ ದೇವಾಲಯದಲ್ಲಿ ತೀರ್ಥ ಅರ್ಪಿಸಿದ ಅವರು ರಾಮ ಮಂದಿರಕ್ಕೆ ಭೇಟಿ ನೀಡಲೇ ಇಲ್ಲ.
ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಈ ವರ್ಷದ ಜನವರಿಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಸಮಾರಂಭಕ್ಕೂ ಗೈರಾಗಿದ್ದರು. ಅಪೂರ್ಣ ದೇವಾಲಯದಲ್ಲಿ ರಾಮ್ ಲಲ್ಲಾ ಮೂರ್ತಿ ಪ್ರತಿಷ್ಠಾಪಿಸುವುದು ಹಿಂದೂ ಧರ್ಮದ ತತ್ವಗಳಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದರು.
ಪೂರ್ಣಗೊಳ್ಳದ ದೇವಸ್ಥಾನದಲ್ಲಿ ದೇವರನ್ನು ಪ್ರತಿಷ್ಠಾಪಿಸುವುದು ಸರಿಯಲ್ಲ ಇದು ಸನಾತನ ಧರ್ಮಕ್ಕೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದರು.
ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ನೊಂದಿಗೆ ಗುರುತಿಸಿಕೊಂಡಿರುವ ಸ್ವಾಮೀಜಿಗಳು, ಶಂಕರಾಚಾರ್ಯರು ಪ್ರಾಣ ಪ್ರತಿಷ್ಠಾಪನೆ ಸಮಾರಂಭವನ್ನು ಬಿಟ್ಟುಬಿಟ್ಟಿದ್ದಕ್ಕಾಗಿ ಟೀಕಿಸಿದ್ದರು.