ಕುಂಭಮೇಳ ಸರಿಯಾಗಿ ನಿರ್ವಹಣೆ ಮಾಡಿಲ್ಲ: ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ
ಮಮತಾ ಬ್ಯಾನರ್ಜಿ ಬೆನ್ನಲ್ಲೇ ಕುಂಭ ಮೇಳ ಸಂಘಟಕರನ್ನು ಟೀಕಿಸಿದ ಸ್ವಾಮೀಜಿ

PC : ANI
ಹೊಸದಿಲ್ಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೃತ್ಯುಕುಂಭ ಹೇಳಿಕೆಯನ್ನು ಬಿಜೆಪಿ ನಾಯಕರು ಟೀಕಿಸಿದ ಬೆನ್ನಲ್ಲೇ ಉತ್ತರಾಖಂಡದ ಜ್ಯೋತಿಷ್ ಪೀಠದ 46ನೇ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಕುಂಭಮೇಳವನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಕೇಂದ್ರ ಸರಕಾರ ಮತ್ತು ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರಕಾರ ಮಹಾ ಕುಂಭಮೇಳವನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು. ನೂಕುನುಗ್ಗಲು, ನೂರಾರು ಕಿಲೋಮೀಟರ್ ಉದ್ದದ ಟ್ರಾಫಿಕ್ ಜಾಮ್ ಸೇರಿದಂತೆ ಹಲವು ವಿಷಯಗಳ ಬಗ್ಗೆ ಪ್ರಸ್ತಾಪಿಸಿ ಕುಂಭಮೇಳದ ಸಂಘಟಕರು ಸರಿಯಾಗಿ ವ್ಯವಸ್ಥೆಯನ್ನು ಕಲ್ಪಿಸಿಲ್ಲ ಎಂದು ಟೀಕಿಸಿದ್ದರು.
ಮಹಾಕುಂಭವು ಮೃತ್ಯು ಕುಂಭವಾಗಿ ಮಾರ್ಪಟ್ಟಿದೆ. ನಾನು ಮಹಾಕುಂಭವನ್ನು ಗೌರವಿಸುತ್ತೇನೆ, ಪವಿತ್ರ ಗಂಗಾ ಮಾತೆಯನ್ನು ನಾನು ಗೌರವಿಸುತ್ತೇನೆ. ಅವರು ಯಾವುದೇ ಯೋಜನೆ ರೂಪಿಸಿಲ್ಲ. ಶ್ರೀಮಂತರು, ವಿಐಪಿಗಳಿಗೆ ವ್ಯವಸ್ಥೆಗಳನ್ನು ಮಾಡಲಾಗಿದೆ. ಬಡವರಿಗೆ ಕುಂಭದಲ್ಲಿ ಯಾವುದೇ ವ್ಯವಸ್ಥೆಗಳನ್ನು ಮಾಡಿಲ್ಲ ಎಂದು ಹೇಳಿದ್ದರು.
ಮಮತಾ ಬ್ಯಾನರ್ಜಿಯವರ ಈ ಹೇಳಿಕೆಗೆ ಕೇಂದ್ರ ಮತ್ತು ಪಶ್ಚಿಮ ಬಂಗಾಳದ ಬಿಜೆಪಿ ನಾಯಕರು ಖಂಡನೆ ವ್ಯಕ್ತಪಡಿಸಿದ್ದಾರೆ. ಮಮತಾ ಹೇಳಿಕೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ ಎಂದು ಹೇಳಿದ್ದರು.
ಇದೀಗ ಮಮತಾ ಬ್ಯಾನರ್ಜಿಯ ಹೇಳಿಕೆಯನ್ನು ಸಮರ್ಥಿಸುವಂತಹ ಹೇಳಿಕೆಯನ್ನು ಜ್ಯೋತಿಷ್ ಪೀಠದ 46ನೇ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿದ್ದು, ಮಹಾಕುಂಭ ಸಂಘಟಕರು ಸರಿಯಾದ ಜನಸಂದಣಿ ನಿರ್ವಹಣಾ ಪ್ರಕ್ರಿಯೆಗಳನ್ನು ಅನುಸರಿಸಲಿಲ್ಲ ಎಂದು ಆರೋಪಿಸಿದ್ದಾರೆ.
300 ಕಿಲೋಮೀಟರ್ ಟ್ರಾಫಿಕ್ ಜಾಮ್ ಆಗಿತ್ತು. ಇದು ಅಸಮರ್ಪಕ ನಿರ್ವಹಣೆಯಲ್ಲದೆ ಮತ್ತೇನು? ಜನರು ತಮ್ಮ ಲಗೇಜ್ಗ ಳೊಂದಿಗೆ 25 ರಿಂದ 30 ಕಿಲೋಮೀಟರ್ ನಡೆದುಕೊಂಡು ಹೋಗಬೇಕಾಗಿದೆ. ನದಿಗೆ ಕೊಳಚೆ ನೀರು ಸೇರಿದೆ. ಆದರೆ, ನೀವು ಅದರಲ್ಲಿ ಸ್ನಾನ ಮಾಡಲು ಕೋಟಿಗಟ್ಟಲೆ ಜನರನ್ನು ಒತ್ತಾಯಿಸುತ್ತಿದ್ದೀರಿ. ನಿಮ್ಮ ಕೆಲಸ ಕೆಲವು ದಿನಗಳ ಕಾಲ ಚರಂಡಿಗಳನ್ನು ತಡೆಯುವುದು ಅಥವಾ ಜನರು ಸ್ನಾನ ಮಾಡುವಾಗ ಶುದ್ಧ ನೀರು ಸಿಗುವಂತೆ ವ್ಯವಸ್ಥೆ ಮಾಡುವುದು. 12 ವರ್ಷಗಳ ನಂತರ ಮಹಾಕುಂಭ ಬರುತ್ತದೆ ಎಂದು ನಿಮಗೆ 12 ವರ್ಷಗಳ ಹಿಂದೆ ತಿಳಿದಿತ್ತು, ಈ ನಿಟ್ಟಿನಲ್ಲಿ ನೀವು ಏಕೆ ಪ್ರಯತ್ನ ಮಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇಷ್ಟು ಜನ ಬರುತ್ತಾರೆ ಅಂತ ಮೊದಲೇ ಗೊತ್ತಾದಾಗ ಅದಕ್ಕೊಂದು ಯೋಜನೆ ರೂಪಿಸಬೇಕಿತ್ತು, ಆದರೆ ಅದನ್ನು ಮಾಡಿಲ್ಲ, ಸುಳ್ಳು ಪ್ರಚಾರ ಮಾಡುತ್ತಾರೆ, 144 ವರ್ಷದ ಮಾತು ಸುಳ್ಳು, ಜನಜಂಗುಳಿ ನಿರ್ವಹಣೆ ವ್ಯವಸ್ಥೆಯನ್ನು ಮಾಡಿಲ್ಲ. ಜನರು ಮೃತಪಟ್ಟಾಗಲೂ ಮರೆಮಾಚಲು ಯತ್ನಿಸಿದ್ದು ಘೋರ ಅಪರಾಧ. ಅಂತಹ ಪರಿಸ್ಥಿತಿಯಲ್ಲಿ ಯಾರಾದರು ಅದರ ಬಗ್ಗೆ ಮಾತನಾಡಿದರೆ ನಾವು ಅದನ್ನು ವಿರೋಧಿಸುವುದಕ್ಕೆ ಆಗುವುದಿಲ್ಲ ಎಂದು ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿದರು.