ಬೆಂಗಳೂರಿನಲ್ಲಿ ಪ್ರತಿಪಕ್ಷಗಳ 2ನೇ ದಿನದ ಸಭೆಗೆ ಶರದ್ ಪವಾರ್ ಭಾಗಿ: ಎನ್ ಸಿಪಿ
ಬೆಂಗಳೂರು: ಬೆಂಗಳೂರಿನಲ್ಲಿ ಇಂದಿನಿಂದ ಆರಂಭವಾಗಲಿರುವ ವಿಪಕ್ಷಗಳ ಸಭೆಯ ಎರಡನೆ ದಿನದಂದು ಎನ್ ಸಿಪಿ ವರಿಷ್ಟ ಶರದ್ ಪವಾರ್ ಪಾಲ್ಗೊಳ್ಳಲಿದ್ದಾರೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ ಸಿಪಿ) ತಿಳಿಸಿದೆ. ಶರದ್ ಪವಾರ್ ಇಂದಿನ ಮೊದಲ ದಿನದ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂಬ ವರದಿಗೆ ಎನ್ ಸಿಪಿ ಈ ಹೇಳಿಕೆ ನೀಡಿದೆ.
ಜೂನ್ 23 ರಂದು ಬಿಹಾರದ ಪಾಟ್ನಾದಲ್ಲಿ ನಡೆದ ಹಿಂದಿನ ವಿರೋಧ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದ 82 ವರ್ಷದ ನಾಯಕ ಪವಾರ್ ನಾಳೆ ತಮ್ಮ ಪುತ್ರಿ ಸುಪ್ರಿಯಾ ಸುಳೆ ಅವರೊಂದಿಗೆ ಬೆಂಗಳೂರಿಗೆ ಹೋಗಲಿದ್ದಾರೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ ಸಿಪಿ) ತಿಳಿಸಿದೆ.
2024 ರ ರಾಷ್ಟ್ರೀಯ ಚುನಾವಣೆಗೆ ಮುಂಚಿತವಾಗಿ ವಿರೋಧ ಪಕ್ಷಗಳ ಒಗ್ಗಟ್ಟನ್ನು ರೂಪಿಸುವ ಪ್ರಯತ್ನಗಳಲ್ಲಿ ಪ್ರಮುಖರಾಗಿರುವ ಪವಾರ್ ಅವರು ಇತ್ತೀಚೆಗೆ ಬೇರ್ಪಟ್ಟ ಸೋದರಳಿಯ ಅಜಿತ್ ಪವಾರ್ ಅವರೊಂದಿಗೆ ರವಿವಾರ ಅನಿರೀಕ್ಷಿತ ಭೇಟಿಯಾಗಿದ್ದರು. ಭೇಟಿಯ ಮರುದಿನವೇ ಬೆಂಗಳೂರು ಸಮಾವೇಶದಿಂದ ಹೊರಗುಳಿಯುತ್ತಾರೆ ಎಂಬ ವರದಿ ಹಲವು ಊಹಾಪೋಹಗಳಿಗೆ ಕಾರಣವಾಗಿತ್ತು. ಪವಾರ್ ನೇತೃತ್ವದ NCP ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ-ಬಿಜೆಪಿ ಸರಕಾರವನ್ನು ಸೇರಿಕೊಂಡಿದೆ.
ಸಂಸತ್ತಿನ ಮುಂಗಾರು ಅಧಿವೇಶನ ಮತ್ತು 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಒಗ್ಗಟ್ಟಿನ ಕಾರ್ಯತಂತ್ರದ ಕುರಿತು ಚರ್ಚಿಸಲು ಬೆಂಗಳೂರಿನಲ್ಲಿ ಕಾಂಗ್ರೆಸ್ ಕರೆದಿರುವ ಸಭೆಯಲ್ಲಿ 24 ವಿರೋಧ ಪಕ್ಷಗಳ ಪ್ರಮುಖ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ.
ಪ್ರತಿಪಕ್ಷಗಳಿಗೆ ಉತ್ತೇಜನ ನೀಡುವಂತೆ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ (ಎಎಪಿ) ದೆಹಲಿಯ ಅಧಿಕಾರಶಾಹಿ ನಿಯಂತ್ರಣದ ಮೇಲಿನ ಕೇಂದ್ರ ಆದೇಶದ ವಿರುದ್ಧ ಪಕ್ಷದ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲವಾಗಿ ಬಂದ ನಂತರ ಸಭೆ ಸೇರಲು ನಿರ್ಧರಿಸಿದೆ. ಕಾಂಗ್ರೆಸ್ ತನ್ನ ಉದ್ದೇಶಕ್ಕೆ ಬೆಂಬಲ ಘೋಷಿಸದಿದ್ದರೆ ಸಭೆಯನ್ನು ಬಹಿಷ್ಕರಿಸುವುದಾಗಿ ಎಎಪಿ ಬೆದರಿಕೆ ಹಾಕಿತ್ತು