ನೈಜ ಎನ್ ಸಿ ಪಿ ಕುರಿತು ಚುನಾವಣಾ ಆಯೋಗದ ನಿರ್ಧಾರ; ಶರದ್ ಪವಾರ್ ಅರ್ಜಿಯ ತುರ್ತು ವಿಚಾರಣೆ ಪರಿಶೀಲಿಸಲಿರುವ ಸುಪ್ರೀಂ ಕೋರ್ಟ್
ಶರದ್ ಪವಾರ್, ಫೋಟೋ: PTI
ಹೊಸದಿಲ್ಲಿ : ಅಜಿತ್ ಪವಾರ್ ನೇತೃತ್ವದ ಬಣಕ್ಕೆ ನಿಜವಾದ ಎನ್ ಸಿ ಪಿ ಎಂದು ಮಾನ್ಯತೆ ನೀಡಿರುವ ಚುನಾವಣಾ ಆಯೋಗದ ಆದೇಶವನ್ನು ಪ್ರಶ್ನಿಸಿ ಶರದ್ ಪವಾರ್ ಅವರು ಸಲ್ಲಿಸಿರುವ ಅರ್ಜಿಯ ತುರ್ತು ವಿಚಾರಣೆ ಕುರಿತು ಪರಿಶೀಲಿಸುವುದಾಗಿ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ತಿಳಿಸಿದೆ.
ತನ್ನ ನೇತೃತ್ವದ ಬಣವು ಅವಳಿ ಹಿನ್ನಡೆಗಳನ್ನು ಅನುಭವಿಸಿರುವ ಹಿನ್ನೆಲೆಯಲ್ಲಿ ಮತ್ತು ತನ್ನ ಬಣದ ಶಾಸಕರು ಸಚೇತಕಾಜ್ಞೆಯ ಸಂಭಾವ್ಯ ಉಲ್ಲಂಘನೆಗಾಗಿ ಕ್ರಮವನ್ನು ಎದುರಿಸಬೇಕಾದ ಆತಂಕದಿಂದಾಗಿ ಪವಾರ್ ತನ್ನ ಅರ್ಜಿಯ ತುರ್ತು ವಿಚಾರಣೆಯನ್ನು ಕೋರಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್ ಅವರ ಫೆ.15ರ ಆದೇಶದ ಹಿನ್ನೆಲೆಯಲ್ಲಿ ಅರ್ಜಿಯ ತುರ್ತು ವಿಚಾರಣೆ ಅಗತ್ಯವಾಗಿದೆ ಎಂದು ಪವಾರ್ ಪರ ವಕೀಲ ಅಭಿಷೇಕ ಸಿಂಘ್ವಿ ಅವರು ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠಕ್ಕೆ ನಿವೇದಿಸಿದರು.
ಅಜಿತ್ ಪವಾರ್ ನೇತೃತ್ವದ ಬಣವು ನಿಜವಾದ ಎನ್ ಸಿ ಪಿಯಾಗಿದೆ ಎಂದು ನಾರ್ವೇಕರ್ ತನ್ನ ಆದೇಶದಲ್ಲಿ ಎತ್ತಿ ಹಿಡಿದಿದ್ದಾರೆ. ಫೆ.6ರಂದು ಅಜಿತ್ ಪವಾರ್ ಬಣವು ನೈಜ ಎನ್ ಸಿ ಪಿಯಾಗಿದೆ ಎಂದು ಪ್ರಕಟಿಸಿದ್ದ ಚುನಾವಣಾ ಆಯೋಗವು, ಪಕ್ಷದ ‘ಗಡಿಯಾರ’ ಚಿಹ್ನೆಯನ್ನು ಅದಕ್ಕೆ ನೀಡಿತ್ತು.
‘ಫೆ.20ರಂದು ಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಅಧಿವೇಶನ ಆರಂಭಗೊಳ್ಳಲಿದೆ ಮತ್ತು ಅಜಿತ್ ಪವಾರ್ ಬಣವು ಹೊರಡಿಸಬಹುದಾದ ಸಚೇತಕಾಜ್ಞೆಯನ್ನು ಶರದ್ ಪವಾರ್ ಬಣವು ಪಾಲಿಸಬೇಕಾಗುತ್ತದೆ. ನಮಗೆ ಪರ್ಯಾಯ ಚಿಹ್ನೆಯನ್ನೂ ನೀಡಲಾಗಿಲ್ಲ, ಹೀಗಾಗಿ ನಮ್ಮ ಪ್ರಕರಣವು ಶಿವಸೇನೆಯ ಉದ್ಧವ ಠಾಕ್ರೆ ಬಣಕ್ಕಿಂತಲೂ ಕೆಟ್ಟದಾಗಿದೆ’ ಎಂದು ಸಿಂಘ್ವಿ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ.ಚಂದ್ರಚೂಡ್,‘ತುರ್ತು ವಿಚಾರಣೆಯ ನಿಮ್ಮ ಕೋರಿಕೆಯನ್ನು ನಾನು ಪರಿಶೀಲಿಸುತ್ತೇನೆ’ ಎಂದು ತಿಳಿಸಿದರು.