ಬಾಬರಿ ಮಸೀದಿಗೆ ಏನೂ ಆಗದು ಎಂದು ಆಗಿನ ಪ್ರಧಾನಿ ಪಿ.ವಿ. ನರಸಿಂಹ ರಾವ್‌ಗೆ ಬಿಜೆಪಿ ನಾಯಕಿ ವಿಜಯರಾಜೇ ಸಿಂಧಿಯಾ ಭರವಸೆ ನೀಡಿದ್ದರು: ಶರದ್ ಪವಾರ್
ಹೊಸದಿಲ್ಲಿ: ದೇಶದಲ್ಲಿ 1992ರಲ್ಲಿ ರಾಮ ಜನ್ಮಭೂಮಿ ಆಂದೋಲನ ತೀವ್ರಗೊಳ್ಳುತ್ತಿದ್ದಂತೆಯೇ, ಬಾಬರಿ ಮಸೀದಿಗೆ ಏನೂ ಆಗದು ಎಂದು ಬಿಜೆಪಿ ನಾಯಕಿ ವಿಜಯರಾಜೇ ಸಿಂಧಿಯಾ ಅವರು ನೀಡಿದ ಆಶ್ವಾಸನೆಯನ್ನು ತಮ್ಮ ಸ್ವಂತ ಸಚಿವರ ಸಲಹೆಗೆ ವಿರುದ್ಧವಾಗಿ ಆಗಿನ ಪ್ರಧಾನಿ ಪಿ ವಿ ನರಸಿಂಹ ರಾವ್ ಅವರು ನಂಬಿದ್ದರು ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಮಂಗಳವಾರ ಬಹಿರಂಗಪಡಿಸಿದ್ದಾರೆ.
ಹಿರಿಯ ಪತ್ರಕರ್ತೆ ನೀರಜಾ ಚೌಧುರಿ ಅವರ ಕೃತಿ “ಹೌ ಪ್ರೈಮ್ ಮಿನಿಸ್ಟರ್ಸ್ ಡಿಸೈಡ್” ಇದರ ಬಿಡುಗಡೆ ಸಮಾರಂಭದಲ್ಲಿ ಪವಾರ್ ಮಾತನಾಡುತ್ತಿದ್ದರು. ಆಗ ರಕ್ಷಣಾ ಸಚಿವರಾಗಿದ್ದ ಪವಾರ್ ತಾವು ಆಗಿನ ಗೃಹ ಕಾರ್ಯದರ್ಶಿ ಮತ್ತು ಗೃಹ ಸಚಿವರ ಜೊತೆಗೆ ಸಭೆಯಲ್ಲಿ ಉಪಸ್ಥಿತರಿದ್ದುದಾಗಿ ತಿಳಿಸಿದರು.
“ಸಚಿವರ ಒಂದು ಗುಂಪು ಇತ್ತು ಹಾಗೂ ನಾನು ಅವರಲ್ಲೊಬ್ಬನಾಗಿದ್ದೆ. ಸಂಬಂಧಿತ ಪಕ್ಷದ ನಾಯಕರ ಸಭೆಯನ್ನು ಪ್ರಧಾನಿ ಆಯೋಜಿಸಬೇಕೆಂದು ನಿರ್ಧರಿಸಲಾಯಿತು. ಆ ಸಭೆಯಲ್ಲಿ ಉಪಸ್ಥಿತರಿದ್ದ ವಿಜಯ ರಾಜೇ ಸಿಂಧಿಯಾ ಅವರು ಬಾಬ್ರಿ ಮಸೀದಿಗೆ ಏನೂ ಆಗದು ಎಂದು ಪ್ರಧಾನಿಗೆ ಆಶ್ವಾಸನೆ ನೀಡಿದರು,” ಎಂದು ಪವಾರ್ ಹೇಳಿದರು.
ತಾನು, ಗೃಹ ಸಚಿವ ಹಾಗೂ ಗೃಹ ಕಾರ್ಯದರ್ಶಿ ಏನು ಬೇಕಾದರೂ ನಡೆಯಬಹುದೆಂದು ಅಂದುಕೊಂಡಿದ್ದರೂ ಆಗಿನ ಪ್ರಧಾನಿ ರಾವ್ ಮಾತ್ರ ಸಿಂಧಿಯಾ ಅವರನ್ನು ನಂಬಿದರು, ಎಂದು ಪವಾರ್ ಹೇಳಿದರು.
ಮಸೀದಿ ಧ್ವಂಸಗೊಂಡ ನಂತರ ಪಿ ವಿ ನರಸಿಂಹ ರಾವ್ ಅವರು ಕೆಲ ಹಿರಿಯ ಪತ್ರಕರ್ತರೊಂದಿಗೆ ನಡೆಸಿದ ಸಂಭಾಷಣೆಯನ್ನು ಲೇಖಕಿ ನೆನಪಿಸಿಕೊಂಡಿದ್ದಾರೆ. ಮಸೀದಿ ಧ್ವಂಸಗೊಂಡಾಗ ನೀವೇನು ಮಾಡುತ್ತಿದ್ದೀರಿ ಎಂದು ಪತ್ರಕರ್ತರು ರಾವ್ ಅವರನ್ನು ಕೇಳಿದರು. ಅದಕ್ಕೆ ಉತ್ತರಿಸಿದ ರಾವ್, "ತಾನು ಅದು ನಡೆಯಲು ಬಿಟ್ಟಿದ್ದಾಗಿ ಹಾಗೂ ಇದರಿಂದಾಗಿ ಒಂದು ವಿಷಯ ಕೊನೆಗೊಳ್ಳುತ್ತದೆ ಹಾಗೂ ಬಿಜೆಪಿ ತನ್ನ ಪ್ರಮುಖ ರಾಜಕೀಯ ವಿಚಾರ ಕಳೆದುಕೊಳ್ಳಲಿದೆ" ಎಂದಿದ್ದರು ಎಂದು ಲೇಖಕಿ ಹೇಳಿಕೊಂಡಿದಾರೆ.
ಕೃತಿಯನ್ನು ಶರದ್ ಪವಾರ್, ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಕಾಂಗ್ರೆಸ್ ನಾಯಕ ಶಶಿ ತರೂರ್, ಬಿಜೆಪಿ ನಾಯಕ ದಿನೇಶ್ ತ್ರಿವೇದಿ ಹಾಗೂ ಮಹಾರಾಷ್ಟ್ರದ ಮಾಜಿ ಸಿಎಂ ಪೃಥ್ವೀರಾಜ್ ಚವಾಣ್ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದ ವೇಳೆ ನಡೆದ ಸಂವಾದವನ್ನು ಹಿರಿಯ ಪತ್ರಕರ್ತ ರಾಜದೀಪ್ ಸರ್ದೇಸಾಯಿ ನಿರೂಪಿಸಿದ್ದರು.
ಚೌಧುರಿ ಅವರ ಕೃತಿಯು ದೇಶದ ಪ್ರಧಾನಿಗಳ ಕಾರ್ಯವೈಖರಿಯನ್ನು ಅವರು ಕೈಗೊಂಡ ಐತಿಹಾಸಿಕ ಮಹತ್ವದ ಆರು ನಿರ್ಧಾರಗಳ ಆಧಾರದಲ್ಲಿ ವಿಶ್ಲೇಷಿಸಿದೆ.
ತುರ್ತುಪರಿಸ್ಥಿತಿ ನಂತರದ ಸೋಲಿನಿಂದ ಹೊರಬಂದು 1980ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅಧಿಕಾರಕ್ಕೆ ಬಂದಿದ್ದು, ಶಾಹ್ ಬಾನೋ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಕೈಬಿಡಲು ರಾಜೀವ್ ಗಾಂಧಿ ಕೈಗೊಂಡ ನಿರ್ಧಾರ, ವಿ ಪಿ ಸಿಂಗ್ ಅವರ ಮಂಡಲ್ ವರದಿ ಜಾರಿ ನಿರ್ಧಾರ, ಬಾಬರಿ ಮಸೀದಿ ಧ್ವಂಸ ಘಟನೆ ವೇಳೆ ಪ್ರಧಾನಿ ಪಿ ವಿ ನರಸಿಂಹ ರಾವ್ ಕಾರ್ಯವೈಖರಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಹಾಗೂ ಮನಮೋಹನ್ ಸಿಂಗ್ ಸರಕಾರಗಳ ವಿಚಾರವನ್ನು ಈ ಕೃತಿ ವಿಶ್ಲೇಷಿಸಿದೆ.