ಶರ್ಜೀಲ್ ಇಮಾಮ್ ಸೋದರ ಸಂಬಂಧಿ ಫರ್ಹಾ ನಿಶಾತ್ ನ್ಯಾಯಾಧೀಶರಾಗಿ ಆಯ್ಕೆ
ಫರ್ಹಾ ನಿಶಾತ್ , ಶರ್ಜೀಲ್ ಇಮಾಮ್ | PC : newsx.com
ಹೊಸದಿಲ್ಲಿ: 2020ರ ದಿಲ್ಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ದೇಶದ್ರೋಹ ಮತ್ತು ಹಿಂಸಾಚಾರ ಪ್ರಕರಣದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಜಾಮೀನು ಸಿಗದೆ ವಿಧ್ಯಾರ್ಥಿ ನಾಯಕ ಶರ್ಜೀಲ್ ಇಮಾಮ್ ಜೈಲಿನಲ್ಲಿದ್ದಾರೆ. ನ್ಯಾಯಕ್ಕಾಗಿ ಅವರ ಕುಟುಂಬ ಹೋರಾಟ ನಡೆಸುತ್ತಿದ್ದರೆ ಇದೀಗ ಅದೇ ಕುಟುಂಬದ ಹೆಣ್ಣುಮಗಳು ಫರ್ಹಾ ನಿಶಾತ್ ಬಿಹಾರದ ನ್ಯಾಯಾಂಗ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.
ಶರ್ಜೀಲ್ ಇಮಾಮ್ ಪರ ಕಾನೂನು ಹೋರಾಟಗಳನ್ನು ನಡೆಸುತ್ತಿರುವ ಸಹೋದರ ಸಂಬಂಧಿ ಮುಝಮ್ಮಿಲ್ ಇಮಾಮ್ ತಮ್ಮ ಸಹೋದರಿ ಫರ್ಹಾ ನಿಶಾತ್ ಬಿಹಾರ ನ್ಯಾಯಾಂಗ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಬಗ್ಗೆ ಫೇಸ್ಬುಕ್ ನಲ್ಲಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಈ ಕುರಿತು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಮುಝಮ್ಮಿಲ್, ಜೀವನವು ವ್ಯತಿರಿಕ್ತವಾಗಿದೆ. ಒಂದೆಡೆ ನನ್ನ ಸಹೋದರ ದಬ್ಬಾಳಿಕೆಯ ವಿರುದ್ಧ ನ್ಯಾಯಕ್ಕಾಗಿ ಹೋರಾಡುತ್ತಿದ್ದರೆ, ಮತ್ತೊಂದೆಡೆ, ನನ್ನ ಸಹೋದರಿ ಈಗ ನ್ಯಾಯಾಧೀಶರ ಪೀಠದಲ್ಲಿ ಕುಳಿತು ನ್ಯಾಯ ನೀಡುವ ಕೆಲಸ ಮಾಡುತ್ತಿದ್ದಾರೆ. ಬಿಹಾರ ನ್ಯಾಯಾಂಗ ಸೇವಾ ಪರೀಕ್ಷೆಯಲ್ಲಿ ಫರ್ಹಾ ನಿಶಾತ್ ಅವರ ಯಶಸ್ಸು ನಮಗೆ ಹೆಮ್ಮೆ ತಂದಿದೆ. ನಿಮ್ಮ ಅವಧಿಯಲ್ಲಿ ಯಾವುದೇ ಮುಗ್ಧ ವ್ಯಕ್ತಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೀರಿ ಎಂದು ನಾನು ಭಾವಿಸುತ್ತೇನೆ. ಅಲ್ಲಾಹನು ನಿಮಗೆ ಶಕ್ತಿ ಮತ್ತು ಧೈರ್ಯವನ್ನು ನೀಡಲಿ ಎಂದು ಹಾರೈಸಿದ್ದಾರೆ.
2020ರ ಜನವರಿ 28ರಂದು ಸಿಎಎ-ಎನ್ಆರ್ ಸಿ ವಿರೋಧಿ ಪ್ರತಿಭಟನೆ ವೇಳೆ ಶರ್ಜೀಲ್ ಅವರನ್ನು ಬಂಧಿಸಲಾಗಿತ್ತು. ಅವರ ವಿರುದ್ಧ ಗಲಭೆಗೆ ಪ್ರಚೋದನೆ, ದೇಶದ್ರೋಹ ಸೇರಿದಂತೆ ಗಂಭೀರ ಆರೋಪಗಳನ್ನು ಹೊರಿಸಲಾಗಿದೆ. ಈ ವರ್ಷದ ಆರಂಭದಲ್ಲಿ ಜಾಮಿಯಾ ಹಿಂಸಾಚಾರ ಪ್ರಕರಣದಲ್ಲಿ ಅವರು ಖುಲಾಸೆಗೊಂಡಿದ್ದರೂ, ಬಾಕಿ ಉಳಿದಿರುವ ಇತರ ಆರೋಪಗಳಿಂದಾಗಿ ಅವರು ಜೈಲಿನಲ್ಲಿದ್ದಾರೆ.