ಫ್ರಾನ್ಸ್ ನ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿ ಸ್ವೀಕರಿಸಿದ ಶಶಿ ತರೂರ್
Photo: twitter.com/kitabwali
ಹೊಸದಿಲ್ಲಿ: ಖ್ಯಾತ ಲೇಖಕ ಮತ್ತು ರಾಜತಾಂತ್ರಿಕರಾಗಿದ್ದು ಬಳಿಕ ರಾಜಕೀಯ ಕ್ಷೇತ್ರ ಪ್ರವೇಶಿಸಿದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಶಶಿ ತರೂರ್ ಅವರು ಮಂಗಳವಾರ ನಡೆದ ಸಮಾರಂಭದಲ್ಲಿ ಫ್ರಾನ್ಸ್ ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಷೆವರ್ಲಿಯರ್ ಡೆ ಲಾ ಲೆಜಿಯಾನ್ ಡಿ'ಹೊನ್ನೂರ್' ಪ್ರಶಸ್ತಿಗೆ ಭಾಜನರಾದರು.
ಹಲವು ಕೃತಿಗಳನ್ನು ರಚಿಸಿರುವ ತಿರುವನಂತಪುರ ಸಂಸದರೂ ಆಗಿರುವ ಶಶಿ ತರೂರ್ ಅವರಿಗೆ ಈ ಅತ್ಯುನ್ನತ ಪ್ರಶಸ್ತಿಯನ್ನು ಫ್ರಾನ್ಸ್ ರಾಯಭಾರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಫ್ರಾನ್ಸ್ ಸೆನೆಟ್ ಅಧ್ಯಕ್ಷ ಜೆರಾರ್ಡ್ ಲಾರ್ಚೆರ್ ಪ್ರದಾನ ಮಾಡಿದರು. ಶಶಿ ತರೂರ್ ಅವರಿಗೆ 2022ರ ಆಗಸ್ಟ್ ನಲ್ಲೇ ಫ್ರಾನ್ಸ್ ಸರ್ಕಾರ ಘೋಷಣೆ ಮಾಡಿತ್ತು.
"ಭಾರತ- ಫ್ರಾನ್ಸ್ ಸಂಬಂಧವನ್ನು ಮತ್ತಷ್ಟು ಗಾಢವಾಗಿಸಲು ಡಾ.ತರೂರ್ ಅವರು ನಡೆಸಿದ ಅವಿತರ ಪ್ರಯತ್ನವನ್ನು ಗುರುತಿಸಿ ಮತ್ತು ಅಂತಾರಾಷ್ಟ್ರೀಯ ಶಾಂತಿ ಹಾಗೂ ಸಹಕಾರಕ್ಕೆ ನೀಡಿದ ಕೊಡಗೆಯನ್ನು ಗೌರವಿಸಿ, ಫ್ರಾನ್ಸ್ ಜತೆಗಿನ ಸುಧೀರ್ಘ ಸ್ನೇಹವನ್ನು ಗೌರವಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ" ಎಂದು ಫ್ರಾನ್ಸ್ ರಾಯಭಾರ ಕಚೇರಿಯ ಪ್ರಕಟಣೆ ಹೇಳಿದೆ.
"ಜ್ಞಾನದಾಹ ಮತ್ತು ತಮ್ಮ ಬುದ್ಧಿಮತ್ತೆಯಿಂದ ಶ್ರೇಷ್ಠ ರಾಜತಾಂತ್ರಿಕರಾಗಿ, ಲೇಖಕರಾಗಿ, ರಾಜಕಾರಣಿಯಾಗಿ ಇಡೀ ಜಗತ್ತನ್ನು ತಲುಪಿದ ಶಶಿ ತರೂರ್ ಅವರು, ಭಾರತದ ಹಾಗೂ ಉತ್ತಮ ವಿಶ್ವಕ್ಕಾಗಿ ಅವಿರತವಾಗಿ ಶ್ರಮಿಸಿದವರು. ಡಾ.ತರೂರ್ ಅವರು ಫ್ರಾನ್ಸ್ ನ ನೈಜ ಮಿತ್ರರಾಗಿದ್ದು, ಫ್ರಾನ್ಸ್ ಹಾಗೂ ಅದರ ಸಂಸ್ಕೃತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು. ಈ ಪ್ರಶಸ್ತಿಯನ್ನು ಪ್ರದಾನ ಮಾಡುವ ಮೂಲಕ ಫ್ರಾನ್ಸ್ ರಿಪಬ್ಲಿಕ್, ನಿಮ್ಮ ಸಾಧನೆ, ಸ್ನೇಹ, ಫ್ರಾನ್ಸ್ ಬಗೆಗಿನ ಪ್ರೀತಿ, ಉತ್ತಮ ವಿಶ್ವಕ್ಕಾಗಿ ನಿಮ್ಮ ಬದ್ಧತೆಯನ್ನು ಗುರುತಿಸಿ ಗೌರವಿಸುತ್ತಿದೆ" ಎಂದು ಲಾರ್ಚೆರ್ ಬಣ್ಣಿಸಿದ್ದಾರೆ.