ನನಗೆ ಪರ್ಯಾಯ ಆಯ್ಕೆಗಳಿವೆ: ಅಸಮಾಧಾನಿತ ಶಶಿ ತರೂರ್ ರಿಂದ ಕಾಂಗ್ರೆಸ್ ಗೆ ಎಚ್ಚರಿಕೆ
"ಕಾಂಗ್ರೆಸ್ ವಿರೋಧಿಗಳೂ ನನಗೆ ಮತ ನೀಡಿದ್ದರು"

ಶಶಿ ತರೂರ್ (Photo: PTI)
ತಿರುವನಂತಪುರಂ: ಒಂದು ವೇಳೆ ಪಕ್ಷವು ನನ್ನನ್ನು ಗೌರವಿಸದಿದ್ದರೆ ನನಗೆ ಪರ್ಯಾಯ ಆಯ್ಕೆಗಳಿವೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಪಕ್ಷದ ನಾಯಕತ್ವಕ್ಕೆ ಎಚ್ಚರಿಕೆ ರವಾನಿಸಿದ್ದಾರೆ.
The Indian Express ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಶಶಿ ತರೂರ್, ಕೇರಳದಲ್ಲಿ ಕಾಂಗ್ರೆಸ್ ನಾಯಕತ್ವದ ಬಿಕ್ಕಟ್ಟು ಎದುರಿಸುತ್ತಿದ್ದು, ಸತತ ಮೂರನೆಯ ಬಾರಿ ಅಧಿಕಾರ ಕಳೆದುಕೊಳ್ಳುವ ಅಪಾಯದಲ್ಲಿದೆ ಎಂದು ಹೇಳಿದ್ದಾರೆ. ಅಲ್ಲದೆ, ಪಕ್ಷವು ನನ್ನ ಸಾಮರ್ಥ್ಯವನ್ನು ಮತ್ತಷ್ಟು ಉತ್ತಮವಾಗಿ ಬಳಸಿಕೊಳ್ಳಬೇಕು ಎಂದೂ ಆಗ್ರಹಿಸಿದ್ದಾರೆ.
ಒಂದು ವೇಳೆ ಪಕ್ಷವೇನಾದರೂ ನನ್ನನ್ನು ಬಳಸಿಕೊಳ್ಳಲು ಬಯಸಿದರೆ, ನಾನು ಲಭ್ಯವಿದ್ದೇನೆ. ಇಲ್ಲವಾದರೆ, ನನಗೆ ನನ್ನದೇ ಆದ ಬಾಧ್ಯತೆಗಳಿವೆ ಎಂದು ಅವರು ಹೇಳಿದ್ದಾರೆ. ಜಾಗತಿಕ ಕಾರ್ಯಕ್ರಮಗಳು, ಪುಸ್ತಕಗಳು ಹಾಗೂ ಉಪನ್ಯಾಸ ಅವಕಾಶಗಳನ್ನು ಉಲ್ಲೇಖಿಸಿರುವ ಅವರು, ನನಗೆ ಅವಕಾಶಗಳ ಕೊರತೆ ಇದೆ ಎಂದು ಪಕ್ಷ ಭಾವಿಸಬಾರದು ಎಂದು ಪರೋಕ್ಷವಾಗಿ ಎಚ್ಚರಿಸಿದ್ದಾರೆ.
ಕಾಂಗ್ರೆಸ್ ಅನ್ನು ವಿರೋಧಿಸುವವರೂ ಕೂಡಾ ನನಗೆ ತಿರುವನಂತಪುರಂನಲ್ಲಿ ಮತ ಚಲಾಯಿಸಿದ್ದರು. ಜನರು ನನ್ನ ಭಾಷಣಗಳು ಪ್ರಶಂಸಿಸುತ್ತಾರೆ. 2026ರ ಚುನಾವಣೆಯಲ್ಲಿ ಪಕ್ಷಕ್ಕೆ ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಇದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ವಿವಿಧ ಸಮೀಕ್ಷೆಗಳು ನಾನು ನಾಯಕತ್ವಕ್ಕೆ ಸೂಕ್ತ ಎಂದು ಗುರುತಿಸಿವೆ ಎಂಬುದರತ್ತ ಬೊಟ್ಟು ಮಾಡಿರುವ ಶಶಿ ತರೂರ್, ನಾನು ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಹಾಗೂ ರಮೇಶ್ ಚೆನ್ನಿತ್ತಲರ ಮನವಿಯ ಮೇರೆಗೆ ಕಾಂಗ್ರೆಸ್ ಸೇರ್ಪಡೆಯಾದೆ ಎಂದು ನೆನಪಿಸಿದ್ದಾರೆ.
ಮತದಾರರು ನನ್ನ ಪರವಾಗಿ ತೀರ್ಪನ್ನು ಮಾತ್ರ ನೀಡಿಲ್ಲ, ಬದಲಿಗೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನೂ ನೀಡಿದ್ದಾರೆ ಎಂದೂ ಅವರು ಹೇಳಿದ್ದಾರೆ.