ಕಾರ್ಗಿಲ್ ನಲ್ಲಿ 1999ರ ಪಾಕ್ ಸೇನಾ ದಾಳಿ ಬಗ್ಗೆ ಮಾಹಿತಿ ನೀಡಿದ್ದ ಕುರಿಗಾಹಿ ನಿಧನ
ಲೆಹ್: ಕಾರ್ಗಿಲ್ನಲ್ಲಿ 1999ರಲ್ಲಿ ಪಾಕಿಸ್ತಾನದ ಸೇನೆ ನಡೆಸಿದ ಅತಿಕ್ರಮಣದ ಬಗ್ಗೆ ಭಾರತೀಯ ಸೇನೆಗೆ ಮಾಹಿತಿ ನೀಡಿ ಎಚ್ಚರಿಸಿದ ಕುರಿಗಾಹಿ ತಾಶಿ ನಮ್ಗ್ಯಾಲ್ಗೆ ಭಾರತೀಯ ಸೇನೆ ಸೋಮವಾರ ಹೃದಯಸ್ಪರ್ಶಿ ವಿದಾಯ ನೀಡಿತು. ನಮ್ಗ್ಯಾಲ್ ಕೇಂದ್ರ ಲಡಾಖ್ನ ಆರ್ಯನ್ ಕಣಿವೆಯಲ್ಲಿ ಶನಿವಾರ ಮೃತಪಟ್ಟಿದ್ದರು.
"ದೇಶಕ್ಕಾಗಿ ಆತ ನೀಡಿದ ಕೊಡುಗೆಗೆ ಸೇನೆ ಚಿರಋಣಿ. ಅವರ ನಿಸ್ವಾರ್ಥ ತ್ಯಾಗವನ್ನು ಸದಾ ನೆನೆಯಲಾಗುತ್ತದೆ" ಎಂದು ಫೈರ್ ಅಂಡ್ ಫ್ಯೂರಿ ಕಾಪ್ಸ್ ಅಧಿಕಾರಿ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
"ಅವರ ಕುಟುಂಬಕ್ಕೆ ತಕ್ಷಣದ ನೆರವು ನೀಡಲಾಗಿದೆ ಹಾಗೂ ನಿರಂತರವಾಗಿ ಬೆಂಬಲದ ಭರವಸೆ ನೀಡಲಾಗಿದೆ" ಎಂದು ಶ್ರದ್ಧಾಂಜಲಿ ಸಲ್ಲಿಸಿದೆ. "ಕಾರ್ಗಿಲ್ ದಾಳಿಯ ಬಗ್ಗೆ ಮೊಟ್ಟಮೊದಲ ಬಾರಿಗೆ ನಮ್ಗ್ಯಾಲ್ ಮಾಹಿತಿ ನೀಡಿದ್ದರು" ಎಂದು ಬಣ್ಣಿಸಿದ್ದಾರೆ.
1999ರಲ್ಲಿ ಕಾಣೆಯಾದ ತಮ್ಮ ಕುರಿಗಳನ್ನು ಹುಡುಕುತ್ತಿದ್ದ ವೇಳೆ, ಪಾಕಿಸ್ತಾನಿ ಸೈನಿಕರು ಬತಾಲಿಕ್ ಪರ್ವತ ಶ್ರೇಣಿಯಲ್ಲಿ ಪಠಾಣಿ ದಿರಿಸಿನಲ್ಲಿ ಬಂಕರ್ಗಳನ್ನು ಅಗೆಯುತ್ತಿದ್ದುದನ್ನು ನಮ್ಗ್ಯಾಲ್ ನೋಡಿದ್ದರು. ಪ್ರಾಮಾಣಿಕವಾಗಿ ಈ ಬಗ್ಗೆ ಸೇನೆಗೆ ಆತ ಮಾಹಿತಿ ನೀಡಿದ್ದು, ಈ ಸಕಾಲಿಕ ಎಚ್ಚರಿಕೆಯು ಭಾರತದ ಮಿಲಿಟರಿ ಪ್ರತ್ಯುತ್ತರವನ್ನು ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿತ್ತು.