ಉತ್ತರಾಖಂಡ | ಹಿಂದೂಯೇತರರಿಗೆ ಪ್ರವೇಶ ನಿಷೇಧಿಸಿ ಹಲವು ಗ್ರಾಮಗಳಲ್ಲಿ ಫಲಕಗಳ ಅಳವಡಿಕೆ
Image Credit: X
ಡೆಹ್ರಾಡೂನ್ : ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಹಿಂದೂಯೇತರರಿಗೆ ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಪ್ರವೇಶ ನಿಷೇಧಿಸಿ ಫಲಕಗಳನ್ನು ಹಾಕಲಾಗಿದ್ದು, ಈ ಕುರಿತು ಪೊಲೀಸ್ ತನಿಖೆಗೆ ಆದೇಶಿಸಲಾಗಿದೆ.
ಫಲಕಗಳ ಬಗ್ಗೆ ಸ್ಥ ಳೀಯ ಮುಸ್ಲಿಂ ಸಂಘಟನೆಗಳು ಕಳವಳವನ್ನು ವ್ಯಕ್ತಪಡಿಸಿದೆ. ಸ್ಥಳೀಯ ಪೊಲೀಸರು ಫಲಕಗಳನ್ನು ಹಾಕಿದ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.
ಉತ್ತರಾಖಂಡದ ಡಿಜಿಪಿ ಅಭಿನವ್ ಕುಮಾರ್ ಈ ಬಗ್ಗೆ ತನಿಖೆ ನಡೆಸುವಂತೆ ಸ್ಥಳೀಯ ಪೊಲೀಸರು ಮತ್ತು ಗುಪ್ತಚರ ಘಟಕಗಳಿಗೆ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ರುದ್ರಪ್ರಯಾಗ ಸರ್ಕಲ್ ಆಫೀಸರ್ ಪ್ರಬೋಧ್ ಕುಮಾರ್ ಗಿಲ್ಡಿಯಾಲ, ದುಷ್ಕರ್ಮಿಗಳು ಹಾಕಿರುವ ಹಲವು ವಿವಾದಿತ ಫಲಕಗಳನ್ನು ಈಗಾಗಲೇ ತೆಗೆದುಹಾಕಲಾಗಿದ್ದು, ಇನ್ನು ಕೆಲವನ್ನು ತೆಗೆಯುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದ್ದಾರೆ.
ನ್ಯಾಲ್ಸು ಗ್ರಾಮದ ಹೊರವಲಯದಲ್ಲಿ ಹಾಕಲಾದ ಫಲಕದಲ್ಲಿ “ಹಿಂದೂಗಳಲ್ಲದವರು , ರೋಹಿಂಗ್ಯಾ ಮುಸ್ಲಿಮರು ಮತ್ತು ಬೀದಿ ಬದಿ ವ್ಯಾಪಾರಿಗಳು ವ್ಯಾಪಾರ ಮಾಡುವುದು ಮತ್ತು ಗ್ರಾಮದಲ್ಲಿ ತಿರುಗಾಡುವುದನ್ನು ನಿಷೇಧಿಸಲಾಗಿದೆ. ಗ್ರಾಮದಲ್ಲಿ ಎಲ್ಲಿಯಾದರೂ ಕಂಡುಬಂದರೆ ಶಿಕ್ಷಿಸಲಾಗುವುದು” ಎಂದು ಬರೆಯಲಾಗಿದೆ.
ಈ ಬೋರ್ಡ್ ಬಗ್ಗೆ ನ್ಯಾಲ್ಸು ಗ್ರಾಮದ ಪ್ರಧಾನ ಪ್ರಮೋದ್ ಸಿಂಗ್ ಪ್ರತಿಕ್ರಿಯಿಸಿದ್ದು, ಗ್ರಾಮದ ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಬೀದಿ ಬದಿ ವ್ಯಾಪಾರಿಗಳು ಈ ಪ್ರದೇಶಕ್ಕೆ ಪ್ರವೇಶಿಸುವುದನ್ನು ತಡೆಯಲು ಗ್ರಾಮಸ್ಥರು ಬೋರ್ಡ್ ಗಳನ್ನು ಅಳವಡಿಸಿದ್ದಾರೆ ಎಂದು ಹೇಳಿದ್ದಾರೆ. ಇದೇ ರೀತಿಯ ಸಮಜಾಯಿಷಿಯನ್ನು ಇತರ ಗ್ರಾಮ ಪ್ರಧಾನರು ಕೂಡ ನೀಡಿದ್ದಾರೆ.
ಈ ಬಗ್ಗೆ ಸ್ಥಳೀಯ ಮುಸ್ಲಿಂ ನಿಯೋಗ ಡಿಜಿಪಿ ಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ರಾಜ್ಯದಲ್ಲಿ ಅಲ್ಪಸಂಖ್ಯಾತ ವಿರೋಧಿ ಘಟನೆಗಳು ಹೆಚ್ಚುತ್ತಿವೆ, ಬಲಪಂಥೀಯ ಗುಂಪುಗಳು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡಿವೆ ಎಂದು ಡಿಜಿಪಿ ಗಮನಕ್ಕೆ ತಂದಿದ್ದಾರೆ ಎಂದು ತಿಳಿದು ಬಂದಿದೆ.