2019ರಿಂದ ಪತ್ರಿಕೆಗಳಲ್ಲಿ ಜಾಹೀರಾತಿಗೆ 967.46 ಕೋಟಿ ರೂ. ಖರ್ಚು: ಕೇಂದ್ರ ಸರಕಾರ
Photo: PTI
ಹೊಸದಿಲ್ಲಿ: ಕೇಂದ್ರ ಸರಕಾರವು 2019-20ರಿಂದ 2023-24ರ ಅವಧಿಯಲ್ಲಿ ತನ್ನ ಕಾರ್ಯಕ್ರಮಗಳ ಪ್ರಚಾರಕ್ಕಾಗಿ ಮುದ್ರಣ ಮಾಧ್ಯಮಗಳಿಗೆ 967.46 ಕೋಟಿ ರೂಪಾಯಿ ಮೊತ್ತದ ಜಾಹೀರಾತುಗಳನ್ನು ನೀಡಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮಂಗಳವಾರ ಲೋಕಸಭೆಗೆ ತಿಳಿಸಿದೆ.
ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ಕೇಂದ್ರೀಯ ಸಂವಹನ ಬ್ಯೂರೋ, ಮುದ್ರಣ ಮಾಧ್ಯಮ ಜಾಹೀರಾತು ನೀತಿ, 2020ಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮಗಳಲ್ಲಿ ಜಾಗೃತಿ ಮತ್ತು ಪ್ರಚಾರಕ್ಕಾಗಿ ಜಾಹೀರಾತುಗಳನ್ನು ನೀಡುತ್ತದೆ ಎಂದು ಬಹುಜನ ಸಮಾಜ ಪಕ್ಷದ ಸಂಸದ ಹಾಜಿ ಫಝ್ಲುರ್ ರೆಹಮಾನ್ರಿಗೆ ನೀಡಿರುವ ಲಿಖಿತ ಉತ್ತರದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದರು.
2023 ಮಾರ್ಚ್ 31ರ ವೇಳೆಗೆ, ಪತ್ರಿಕೆಗಳು ಸೇರಿದಂತೆ 1,48,363 ನಿಯತಕಾಲಿಕಗಳು ಭಾರತೀಯ ಪತ್ರಿಕೆಗಳ ರಿಜಿಸ್ಟ್ರಾರ್ (ಆರ್ಎನ್ಐ)ನಲ್ಲಿ ನೋಂದಣಿಯಾಗಿವೆ. ಈ ಸಂಖ್ಯೆಯು 2019ರ ಮಾರ್ಚ್ನಲ್ಲಿ 1,19,995 ಮತ್ತು 2020ರಲ್ಲಿ 1,43,423, 2021ರಲ್ಲಿ 1,44,520 ಮತ್ತು 2022ರಲ್ಲಿ 1,46,045 ಆಗಿತ್ತು.